ಚಾಮರಾಜನಗರ: ಗ್ರಾಮದ ಬಸವ ದೇಗುಲದ ಮೇಲೇರಿದ ಪರಿಣಾಮ ಭಕ್ತರು ಕೆಲಕಾಲ ದಿಗ್ಭ್ರಾಂತರಾದ ಘಟನೆ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲದಲ್ಲಿ ನಡೆದಿದೆ.
ಇಂದು ನಡೆಯಬೇಕಿದ್ದ ದಿವ್ಯಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಕೊರೊನಾ ವೈರಸ್ ಭಯದಿಂದ ಮುಂದೂಡಲಾಗಿತ್ತು. ತೇರಿನ ಮುಂದೆ ಹೆಜ್ಜೆ ಹಾಕುತ್ತಿದ್ದ ಬಸವನನ್ನು ಈ ಬಾರಿ ಬಿಟ್ಟು ಗ್ರಾಮದಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಿ ದೇಗುಲಕ್ಕೆ ಹಿಂತಿರುಗುವಾಗ ದೇಗುಲದ ಛಾವಣಿ ಮೇಲೆ ಬಸವ ಗಂಭೀರವದನನಾಗಿ ನಿಂತಿದ್ದು ಕೆಲವರಲ್ಲಿ ಭಕ್ತಿ, ಆತಂಕವನ್ನು ಏಕಕಾಲದಲ್ಲಿ ಉಂಟು ಮಾಡಿತು.
ಈ ಕುರಿತು ಗ್ರಾಮಸ್ಥರೊಬ್ಬರು ಮಾತನಾಡಿ, ಛಾವಣಿ ಮೇಲೇರಲು ಜಾಗವಿದ್ದು ಆಗಾಗ್ಗೆ ಬಸವ ಹತ್ತುತ್ತಾನೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದಾಗಿದ್ದರಿಂದ ಬಸವನನ್ನು ಕರೆದೊಯ್ದಿರಲಿಲ್ಲ, ದೇವರು ದೇಗುಲಕ್ಕೆ ಬರುವ ವೇಳೆಗೆ ಬಸವ ಛಾವಣಿ ಮೇಲೇರಿ ಸ್ವಾಗತ ಕೋರಿದ್ದಾನೆ ಎಂಬುದು ಒಬ್ಬರ ಭಾವನೆ. ಬಸವನನ್ನು ನಾವು ಉತ್ಸವಮೂರ್ತಿಯೊಂದಿಗೆ ಕರೆದೊಯ್ಯದಿದ್ದರಿಂದ ಕೋಪ ಪ್ರದರ್ಶಿಸಿದ್ದಾನೆ. ಉತ್ಸವ ಮೂರ್ತಿಗೆ ಮಹಾಪೂಜೆಯಾದ ಬಳಿಕ ಕೆಳಗಿಳಿದ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಪರೀಕ್ಷೆ ಮಾಡಿ ಫಲ ನೀಡುವ ದೇವರು, ನಾಲ್ಕು ಯುಗಗಳಿಂದಲೂ ಪೂಜಿಸಲ್ಪಡುತ್ತಿರುವ ಶಿವ ಎಂಬ ಪ್ರತೀತಿ ಇರುವ ದೇವಾಲಯ ಇದಾಗಿದ್ದು, ಸಮೀಪದಲ್ಲೇ ಯಡಿಯೂರು ಸಿದ್ದಲಿಂಗೇಶ್ವರರ ಜನ್ಮ ಸ್ಥಳವೂ ಇದೆ.