ಗುಂಡ್ಲುಪೇಟೆ: ವಿದ್ಯಾಗಮ ಕಾರ್ಯಕ್ರಮದಲ್ಲಿ ದಲಿತ ವಿದ್ಯಾರ್ಥಿಗಳಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆ ತಾಲೂಕಿನ ಚಿಕ್ಕಾಟಿ ಗ್ರಾಮಕ್ಕೆ ತಹಶೀಲ್ದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದರು.
ಅ.3 ರಂದು ವಾಲ್ಮೀಕಿ ಸಮುದಾಯದ ಕಲಿಕಾ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ ದಲಿತ ವಿದ್ಯಾರ್ಥಿಗಳು ಶಿಕ್ಷಕರು ಬಂದಿಲ್ಲ ಎಂದು, ಕನಕಭವನದಲ್ಲಿ ಪಾಠ ಕೇಳಲು ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ದಲಿತ ವಿದ್ಯಾರ್ಥಿಗಳು ಕನಕ ಭವನದ ಒಳಗೆ ಹೋಗಬೇಡಿ, ಹೋದರೆ ಜಾಡಿಸಿ ಒದಿಯುತ್ತೇನೆ ಎಂದು ಹೇಳಿ ಅವಮಾನ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಘಟನೆಯ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ, ದಲಿತ ಮುಖಂಡರ ಜೊತೆ ಸಭೆ ನಡೆಸಿದರು.
ಇನ್ನು ಘಟನೆಯ ಆರೋಪದ ಕುರಿತು ಪ್ರತಿಕ್ರಿಯಿಸಿದ ವಾಲ್ಮೀಕಿ ಭವನದಲ್ಲಿ ಪಾಠ ಮಾಡುವ ಶಿಕ್ಷಕಿ ನಾಗಮಣಿ, ಬೇರೊಂದು ಕಲಿಕಾ ಕೇಂದ್ರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ತಿಳಿಸಿದಾಗ ಅ ವ್ಯಕ್ತಿಯನ್ನು ಪ್ರಶ್ನೆ ಮಾಡಿ ಬೈದಿದ್ದೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ಸಂಬಂಧಪಟ್ಟ ಶಿಕ್ಷಕರಿಗೆ ನೋಟಿಸ್ ನೀಡಿದ್ದೇನೆ. ಉತ್ತರ ಪಡೆದು ವಿದ್ಯಾರ್ಥಿಗಳ ಮಾಹಿತಿ ಆಧರಿಸಿ ಡಿಡಿಪಿಐಗೆ ವರದಿ ನೀಡುತ್ತೇನೆ ಎಂದು ತಿಳಿಸಿದರು.