ಚಾಮರಾಜನಗರ: ಭೋರ್ಗರೆದು ನರ್ತಿಸುತ್ತಿದ್ದ ಭರಚುಕ್ಕಿ ಜಲಪಾತ ನೀರಿಲ್ಲದೇ ಭಣಭಣ ಎನ್ನುತ್ತಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯವಾಗಿ ಕಡಿಮೆಯಾಗಿದೆ.
ಬೇಸಿಗೆ ಬರ್ತಿದೆ. ಕೆಆರ್ಎಸ್, ಕಬಿನಿ ಹೊರಹರಿವು ದೊಡ್ಡ ಪ್ರಮಾಣದಲ್ಲಿರದಿರುವುದರಿಂದ ಫಾಲ್ಸ್‌ನಲ್ಲಿ ಬರೀ ಖಾಲಿ ಖಾಲಿ ಬಂಡೆಗಳ ದರ್ಶನವಾಗುತ್ತಿದೆ. ಕೊಡಗು ಮತ್ತು ಕಬಿನಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದರಿಂದ ಕಾವೇರಿಯ ದೃಶ್ಯ ಕಾವ್ಯವೇ ಆರಂಭವಾಗಿತ್ತು. ಪ್ರತಿ ದಿನ ಪ್ರವಾಸಿಗರ ದಂಡೇ ಭರಚುಕ್ಕಿಯಲ್ಲಿ ನೆರೆಯುತ್ತಿತ್ತು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಕಿಲೋಮೀಟರ್‌ಗಟ್ಟಲೇ ದೂರಕ್ಕೆ ವಾಹನ ದಟ್ಟಣೆ ಉಂಟಾಗಿತ್ತು. ಆದರೆ, ನೀರಿಲ್ಲದೇ ಭಣ ಭಣ ಎನ್ನುತ್ತಿರುವುದರಿಂದ ಕಳೆದ ಡಿಸೆಂಬರ್‌ನಿಂದ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ.
ಈ ಪ್ರವಾಸಿ ತಾಣವನ್ನೇ ನಂಬಿ ಹತ್ತಾರು ಸಣ್ಣ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಪ್ರವಾಸಿಗರು ಇಲ್ಲದಿರುವುದರಿಂದ ವ್ಯಾಪಾರ ನಡೆಯುತ್ತಿಲ್ಲ. ಅವರು ಜೀವನೋಪಾಯಕ್ಕೆ ಬೇರೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭಕ್ಕೂ ಮೊದಲು ಕಾಡು ಒಣಗುತ್ತಿದ್ರೆ, ಜಲಪಾತದ ಜಲಧಾರೆಯೂ ಇಲ್ಲ.