ಚಾಮರಾಜನಗರ : ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಂಡು ಬಂದ ಹಿನ್ನೆಲೆ ಜಾಗೃತವಾಗಿರುವ ಚಾಮರಾಜನಗರ ಜಿಲ್ಲಾಡಳಿತದ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದು, ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚಿನ ಗಮನ ನೀಡಲಾಗಿದೆ.
ಈ ಕುರಿತು ಡಿಹೆಚ್ಒ ಡಾ.ವಿಶ್ವೇಶ್ವರಯ್ಯ ಈಟಿವಿ ಭಾರತದೊಂದಿಗೆ ಮಾತನಾಡಿ, ಗುಂಡ್ಲುಪೇಟೆ-ಕೇರಳ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೋಗ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದರು.
ಸೋಂಕಿತ ಪಕ್ಷಿಗಳು ಕಚ್ಚಿದರೆ, ಇಲ್ಲವೇ ಸೋಕಿದ ಹಣ್ಣುಗಳನ್ನು ತಿಂದರೆ ನಿಫಾ ವೈರಸ್ ಬರಲಿದೆ. ಆದ ಕಾರಣ ಆದಷ್ಟು ಹಣ್ಣುಗಳನ್ನು ತೊಳೆದು ತಿನ್ನುವಂತೆ ಅರಿವು ಮೂಡಿಸಲಾಗುತ್ತಿದೆ. ಜ್ಯೂಸ್ ಅಂಗಡಿಗಳಿಗೂ ಈ ಬಗ್ಗೆ ತಿಳಿ ಹೇಳಲಾಗುವುದು.
ವಾಂತಿ, ಜ್ವರ, ತಲೆನೋವು ಹಾಗೂ ಇನ್ನಿತರ ನಿಫಾ ಸೋಂಕಿನ ಲಕ್ಷಣ ಕಂಡು ಬಂದ ರೋಗಿಗಳ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ಕೊಟ್ಟು ಸೋಂಕಿನ ಲಕ್ಷಣ ಕಂಡು ಬಂದಿರುವ ವ್ಯಕ್ತಿಗಳ ಮಾಹಿತಿಯನ್ನು ತುರ್ತಾಗಿ ವೈದ್ಯಾಧಿಕಾರಿಗಳಿಗೆ ರವಾನಿಸುವಂತೆ ಸೂಚಿಸಲಾಗಿದೆ ಎಂದರು. ಈಗಾಗಲೇ ಕೋವಿಡ್ ಭೀತಿಯಿಂದಾಗಿ ಕೇರಳದಲ್ಲಿ ಚೆಕ್‌ಪೋಸ್ಟ್ ತೆರೆದಿರುವುದರಿಂದ ನಿಫಾ ಸೋಂಕಿನ ಬಗ್ಗೆಯೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ ಎಂದು ಡಿಹೆಚ್ಒ ಮಾಹಿತಿ ನೀಡಿದರು.