ಚಾಮರಾಜನಗರ: ನಾಡಿನೆಲ್ಲೆಡೆ ಇಂದು ಶ್ರದ್ಧಾ ಭಕ್ತಿಯಿಂದ ಷಷ್ಠಿ ಆಚರಣೆ ನಡೆಯುತ್ತಿದೆ. ಇಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಹುತ್ತಕ್ಕೆ ಕೋಳಿ ಮೊಟ್ಟೆಯನ್ನು ನೈವೇದ್ಯವಾಗಿಟ್ಟು ನಾಗಾರಾಧನೆ ಮಾಡಲಾಯಿತು. ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಹಲವೆಡೆ ಹುತ್ತಕ್ಕೆ ಕೋಳಿ ಮೊಟ್ಟೆಯನ್ನು ನೈವೇದ್ಯವಾಗಿ ಇಟ್ಟ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ನಾಗದೇವರನ್ನು ಪ್ರಾರ್ಥಿಸಿದರು.
ಕೃಷಿ ಚಟುವಟಿಕೆಯನ್ನು ಅವಲಂಬಿಸಿರುವವರು ತಮಗೆ ಸರ್ಪಗಳು ತೊಂದರೆ ಕೊಡದಿರಲೆಂದು ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಭಕ್ತರು ಪೂಜೆ ಆಗುವವರೆಗೂ ಒಂದು ಹನಿ ನೀರನ್ನು ಕುಡಿಯುವುದಿಲ್ಲ. ಇತರ ಭಕ್ತರು ಹುತ್ತಕ್ಕೆ ಹಣ್ಣು, ಹಾಲು, ಬೆಣ್ಣೆ, ತುಪ್ಪ ಅರ್ಪಿಸಿ ನಾಗಾರಾಧನೆ ಮಾಡಿದ್ದಾರೆ.
ಸುಬ್ರಹ್ಮಣ್ಯಸ್ವಾಮಿ ಉತ್ಸವ: ಕೊಳ್ಳೇಗಾಲದಲ್ಲಿ ಇಂದು ಸುಬ್ರಹ್ಮಣ್ಯ ಷಷ್ಠಿಯನ್ನು ಭಕ್ತರು ಸಂಭ್ರಮ ಸಡಗರಗಳಿಂದ ಆಚರಿಸಿದರು. ಸುಬ್ರಹ್ಮಣ್ಯಸ್ವಾಮಿ ಉತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನೀತರಾದರು. ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರು ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಘಾಟಿ ಸುಬ್ರಮಣ್ಯದಲ್ಲಿ ಷಷ್ಠಿ ಸಂಭ್ರಮ: ದಕ್ಷಿಣ ಭಾರತದ ಪ್ರಮುಖ ನಾಗರಾಧನೆಯ ಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಇಂದು ಸುಬ್ರಹ್ಮಣ್ಯಷಷ್ಠಿಯನ್ನ ಸಂಭ್ರಮದಿಂದ ಆಚರಿಸಲಾಯಿತು. ಚಂಪಾಷಷ್ಠಿಯಂದು ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಇದಾದ ಒಂದು ತಿಂಗಳ ಬಳಿಕ ಸುಬ್ರಹ್ಮಣ್ಯಷಷ್ಠಿಯನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಸುಬ್ರಹ್ಮಣ್ಯಷಷ್ಠಿ ಹಿನ್ನೆಲೆ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ವಿಶೇಷವಾಗಿ ನಾಗರ ಕಲ್ಲುಗಳಿಗೆ ಹಾಲೆರೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನು ಪ್ರಾರ್ಥಿಸಿದರು.
ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾಷಷ್ಠಿ ವೈಭವ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಚಂಪಾಷಷ್ಠಿ ಉತ್ಸವದ ಭಾಗವಾಗಿ ನಿನ್ನೆ ಪಂಚಮಿ ರಥೋತ್ಸವ ಮತ್ತು ಇಂದು ಮುಂಜಾನೆ ಮಹಾರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಯ ಸಂಭ್ರಮ ಮನೆ ಮಾಡಿದೆ. ಕೊಪ್ಪರಿಗೆ ಏರುವ ಮೂಲಕ ಆರಂಭವಾದ ಇಲ್ಲಿನ ಪ್ರಸಿದ್ಧ ಉತ್ಸವಗಳಲ್ಲಿ ಶೇಷವಾಹನಯುಕ್ತ ಬಂಡಿ ಉತ್ಸವ, ಹೂವಿನ ತೇರಿನ ಉತ್ಸವ, ಪಂಚಮಿ ತೇರು, ದೇವರ ಅಭವೃತೋತ್ಸವ, ಶ್ರೀ ದೇವರ ನೀರುಬಂಡಿ ಉತ್ಸವ, ಲಕ್ಷದೀಪೋತ್ಸವ ಸೇರಿದಂತೆ ಮಹಾ ರಥೋತ್ಸವದಿಂದ ಪ್ರಸಿದ್ಧಿ ಪಡೆದಿದೆ.
ಇದನ್ನೂ ಓದಿ: ಮೈಸೂರು ಸುಬ್ರಹ್ಮಮಣ್ಯೇಶ್ವರ ಷಷ್ಠಿ ಮಹೋತ್ಸವ ರದ್ದು