ಕೊಳ್ಳೇಗಾಲ : ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೆಬ್ಬೆಟ್ಟು ಗಿರಾಕಿ ಎಂಬ ಪದ ಬಳಸಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಶಾಸಕ ಎನ್.ಮಹೇಶ್ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಲಾಗಿದ್ದ ದಕ್ಷಿಣ ಪದವೀಧರ ಕ್ಷೇತ್ರದ ನೋಂದಣೆ ಅಭಿಯಾನ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಭಿನಂದನಾ ಸಮಾರಂಭ ಮತ್ತು ಜಿಲ್ಲಾ ಕಾರ್ಯಕಾರಿಣೆ ಸಭೆ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಮಹೇಶ್ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೇಶದ ಪ್ರಧಾನಿಗಳ ಬಗ್ಗೆ ಅಪ್ರಬುದ್ಧ ಪದ ಬಳಿಸಿ ಮಾತನಾಡಿರುವುದು ಸರಿಯಲ್ಲ. ಅವರ ಸ್ಥಾನ ಗೌರವ ತಕ್ಕಂತೆ ಪದ ಬಳಸಬೇಕು. ಸಿದ್ದರಾಮಯ್ಯ ಅವರಿಗೆ ನನ್ನದೊಂದು ಕಿವಿ ಮಾತು. ನೀವು ಬಳಸಿರುವ ಪದ ನಿಮಗೆ ಸರಿ ಅನ್ನಿಸುತ್ತದೆಯಾ ಎಂದು ಯೋಚಿಸಿ ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿಗಳಾಗಿದ್ದಾರೆ. ಇದನ್ನು ಕಾಂಗ್ರೆಸ್ ಒಪ್ಪುತ್ತದೋ, ಇಲ್ಲವೋ.. ಆದರೆ, ಅದು ಬೇಕಾಗಿಲ್ಲ. ಇಡೀ ದೇಶ ನರೇಂದ್ರ ಮೋದಿ ಪ್ರಧಾನಿ ಅವರನ್ನು ಪ್ರಧಾನಿಯೆಂದು ಒಪ್ಪಿದೆ. ಅಂತವರನ್ನು ನೀವು ಹೆಬ್ಬೆಟ್ಟು ಗಿರಾಕಿ ಎಂದು ಪದ ಬಳಸಿದ್ದೀರಲ್ಲ. ನಿಮ್ಮ ಆತ್ಮಸಾಕ್ಷಿಯನ್ನ ಮುಟ್ಟಿ ಕೇಳಿ ಇಂತಹ ಪದ ಬಳಕೆ ಸರೀನಾ? ಇದು ನಿಮಗೆ ಗೌರವ ತರುವಂತಹ ಪದವೇ ಎಂದು ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಸಹಿ ಹಾಕುತ್ತಾರೆ ಎಂಬುದು ನಿಮಗೆ ಗೊತ್ತಿಲ್ಲವೇ. ಆದೇಶಗಳಿಗೆ ಸಹಿ ಹಾಕುವುದು ತಿಳಿದಿಲ್ಲವೇ..? ಅವರೇನೂ ಹೆಬ್ಬೆಟ್ಟು ಒತ್ತುತಿದ್ದಾರಾ?. ಬೇಕಾದರೆ, ಎಲ್ಲಾ ಮೂಲಗಳಿಂದ ನೀವು ಪರಿಶೀಲಿಸಿ ನರೇಂದ್ರ ಮೋದಿ ಅವರು ಪದವಿ ಪಡೆದುಕೊಂಡವರಾಗಿದ್ದಾರೆ. ಇನ್ಮುಂದೆ ಈ ರೀತಿ ಮಾತನಾಡುವುದನ್ನು ನಿಲ್ಲಿಸಿ, ಇದು ನಿಮ್ಮ ಸ್ಥಾನ, ಅನುಭವಕ್ಕೆ ದಕ್ಕೆ ಉಂಟು ಮಾಡುತ್ತದೆ ಎಂದು ಎಚ್ಚರಿಸಿದರು.