ಚಾಮರಾಜನಗರ: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮೂಗೂರು ತ್ರಿಪುರ ಸುಂದರಿ ದೇವಾಲಯದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನು ಚಾಮರಾಜನಗರದಲ್ಲಿ ಬಂಧಿಸಲಾಗಿದೆ. ಮೈಸೂರಿನ ವಿಶೇಷ ತಂಡ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಬಂಧಿತ ಆರೋಪಿಗಳು ಅಲೆಮಾರಿ ಜನಾಂಗದವರಂತೆ ವೇಷ ಹಾಕಿಕೊಂಡು ಬಿಸಲವಾಡಿ ಗ್ರಾಮದ ಊರ ಹೊರಗೆ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದರು. ಈ ಬಗ್ಗೆ ಖಚಿತ ಮೇರೆಗೆ ಮೈಸೂರಿನ ವಿಶೇಷ ಪೊಲೀಸ್ ತಂಡ ದಾಳಿ ಮಾಡಿದ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ, ಕೆರೆ ದಂಡೆ ಹಾಗೂ ಪೊದೆಗಳಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೂಗೂರು ತ್ರಿಪುರ ಸುಂದರಿ ದೇವಾಲಯ ಸೇರಿದಂತೆ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ದೇಗುಲ ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ತನಿಖೆಗಾಗಿ ಬಂಧಿತರನ್ನು ಮೈಸೂರು ಪೊಲೀಸರು ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಮೂಗೂರು ಶ್ರೀ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಕಳ್ಳತನ