ಚಾಮರಾಜನಗರ: ನಟ ಪುನೀತ್ ರಾಜ್‍ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಅವರ ನಡೆಯನ್ನೇ ಆದರ್ಶವಾಗಿಸಿಕೊಂಡು ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ಸಾವಿರಾರು ಮಂದಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಮಹೇಶ್ ಮಾಹಿತಿ ನೀಡಿ, ಸಿಮ್ಸ್, ಜಿಲ್ಲಾಡಳಿತ, ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತವಾಗಿ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ನೇತ್ರದಾನ ನೋಂದಣಿ ಅಭಿಯಾನ ಕೈಗೊಂಡಿದ್ದವು. ಕಳೆದ ಎರಡು ತಿಂಗಳುಗಳಲ್ಲಿ 9,500 ಸಾವಿರ ಮಂದಿ ನೇತ್ರದಾನ ಮಾಡಲು ಸ್ವಇಚ್ಛೆಯಿಂದ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಚಾಮರಾಜನಗರ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳೇ 900ಕ್ಕೂ ಹೆಚ್ಚು ಮಂದಿ ಇದ್ದಾರೆ ಎಂದರು.
ಈಗಾಗಲೇ ಇಬ್ಬರು ಮೃತರ ಕಣ್ಣುಗಳನ್ನು ತೆಗೆದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಕೊಡಲಾಗಿದೆ. ಇಬ್ಬರ ಮಾಹಿತಿ ತಡವಾಗಿ ತಿಳಿದಿದ್ದರಿಂದ ಅವರ ಕಣ್ಣುಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಲಸಿಕಾ ವಿತರಣೆಯತ್ತ ಹೆಚ್ಚು ಗಮನ ಕೊಟ್ಟಿರುವುದರಿಂದ ನೇತ್ರದಾನ ಅಭಿಯಾನ ಕುಂಠಿತಗೊಂಡಿದ್ದು, ಲಸಿಕಾ ವಿತರಣೆ ಬಳಿಕ ನೇತ್ರದಾನ ನೋಂದಣಿ ಚುರುಕುಗೊಳ್ಳಲಿದೆ ಎಂದು ತಿಳಿಸಿದರು.
ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಜಿಲ್ಲಾಡಳಿತ ನೇತ್ರದಾನ ನೋಂದಣಿ ಅಭಿಯಾನಕ್ಕೆ ಮುಂದಾಗಿತ್ತು. ಜತೆಗೆ, ಚಾಮರಾಜನಗರದಲ್ಲಿ ನಿರ್ಮಾಣವಾಗಲಿರುವ ಕಣ್ಣಿನ ಆಸ್ಪತ್ರೆಗೆ ಪುನೀತ್ ಹೆಸರಿಡಲು ಚಿಂತಿಸಿದೆ.
ಇದನ್ನೂ ಓದಿ: ಪುನೀತ್ ಸ್ಫೂರ್ತಿ.. 12 ಸಾವಿರಕ್ಕೂ ಹೆಚ್ಚು ಜನ ನೇತ್ರದಾನಕ್ಕಾಗಿ ನೋಂದಣಿ..