ಚಾಮರಾಜನಗರ: ಇಲ್ಲಿನ ಶಾಸಕ ಪುಟ್ಟರಂಗಶೆಟ್ಟಿಯವರ ಮಗ ಕುಸುಮರಾಜ್ ಎಂಬವರ ಕಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಯುತ್ತಿದ್ದ ಆನೆಯೊಂದು ಅಡ್ಡಹಾಕಿರುವ ಘಟನೆ ಕರ್ನಾಟಕದ-ತಮಿಳುನಾಡು ಗಡಿಯಾದ ಆಸನೂರು ಸಮೀಪ ನಡೆದಿದೆ.
ಕುಸುಮರಾಜು ಹಾಗೂ ಮತ್ತವರ ಸ್ನೇಹಿತರು ಬಣ್ಣಾರಿ ದೇವಾಲಯಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಯುತ್ತಿದ್ದ ಒಂಟಿ ಸಲಗ ಮೇಯುತ್ತಾ ಮೇಯುತ್ತಾ ಕಾರಿನ ಸನಿಹಕ್ಕೆ ಬಂದು ಅಡ್ಡ ನಿಂತಿದೆ. ಬಳಿಕ ಎಚ್ಚೆತ್ತ ಚಾಲಕ ಕಾರನ್ನು ರಿವರ್ಸ್ ಪಡೆದು ಹಿಂದಕ್ಕೆ ಸರಿದಿದ್ದಾರೆ.
20 ನಿಮಿಷ ರಸ್ತೆಯಲ್ಲೇ ಕಾದು, ಆನೆ ಇನ್ನೊಂದು ಬದಿಗೆ ತೆರಳಿದ ಬಳಿಕ ಕಾರು ಚಲಾಯಿಸಿ ಮುಂದಕ್ಕೆ ಸಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ- ಕೊಯಮತ್ತೂರು ರಸ್ತೆಯಲ್ಲಿ ವಾಹನಗಳಿಗೆ ಆನೆ ಅಡ್ಡಹಾಕುವುದು ಸಾಮಾನ್ಯವಾಗಿದ್ದು, ವಾಹನ ಸವಾರರಿಗೆ ಆತಂಕ ಕಾಡುತ್ತಿದೆ.