ಚಾಮರಾಜನಗರ: ಕೋವಿಡ್ 19 ತಡೆಗಟ್ಟಲು ಒಂದೆಡೆ ಡಿಸಿ ಹಾಗೂ ಎಸ್ಪಿ ಜೊತೆಗಿದ್ದರೆ ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಪರಿಶೀಲನೆಗಾಗಿಯೇ 5 ಬಾರಿ ಸೇರಿದಂತೆ ಜಿಲ್ಲೆಗೆ 15ನೇ ಬಾರಿ ಭೇಟಿ ನೀಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತಮಿಳುನಾಡು, ಕೇರಳ ಗಡಿ ಹಂಚಿಕೊಳ್ಳುವ ಜೊತೆಗೆ ಮಗ್ಗಲಿನಲ್ಲಿ ಕೆಂಡ ಇಟ್ಟುಕೊಂಡಂತೆ 30 ಕಿಮಿ ದೂರದಲ್ಲೇ ಜುಬಿಲಿಯೆಂಟ್ ಕಂಪನಿ ಇದ್ದರೂ ಚಾಮರಾಜನಗರ ಸೇಫಾಗಿರುವಂತೆ ಮಾಡುವಲ್ಲಿ ಡಿಸಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಎಚ್.ಡಿ.ಆನಂದಕುಮಾರ್ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಡುತ್ತಿರುವುದು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಬಿಗಿಯಾಗಲು ಕಾರಣರಾಗಿದ್ದಾರೆ ಎಂಬುದು ಜನರ ಅಭಿಮತ.
ಬೇರೆ ಜಿಲ್ಲೆಗಳ ಉಸ್ತುವಾರಿಗಳಿಗೆ ಹೋಲಿಸಿಕೊಂಡರೆ ಹೆಚ್ಚು ಕ್ರಿಯಾಶೀಲರಾಗಿ ಜಿಲ್ಲಾದ್ಯಂತ ಸುರೇಶ್ ಕುಮಾರ್ ಸಂಚರಿಸಿದ್ದು ಕೇರಳ ಗಡಿ, ತಮಿಳುನಾಡು ಗಡಿ ಭಾಗದ ಚೆಕ್ ಪೊಸ್ಟ್ಗಳಿಗೆ ಭೇಟಿಯಿತ್ತು ವಾಸ್ತವ ಅರಿಯುವ ಪ್ರಯತ್ನ ಮಾಡಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಗೋಸ್ಕರವೇ ಭಾನುವಾರದ ಭೇಟಿ ಸೇರಿದಂತೆ ಅವರು 5ನೇ ಭಾರಿಗೆ ಭೇಟಿ ನೀಡಿದರು. ಉಸ್ತುವಾರಿ ಆದ ಬಳಿಕ 15 ಬಾರಿ ಜಿಲ್ಲಾ ಪ್ರವಾಸ ಮಾಡಿ ಈವರೆಗಿನ ಜಿಲ್ಲಾ ಉಸ್ತುವಾರಿಗಳಿಗಿಂತ (ಹೊರ ಜಿಲ್ಲೆ ಸಚಿವರು) ಹೆಚ್ಚು ಭೇಟಿ ನೀಡಿದ ಸಚಿವರು ಎನಿಸಿಕೊಂಡಿದ್ದಾರೆ.
ಎರಡು ದಿನದ ಪ್ರವಾಸ ಕಾರ್ಯಕ್ರಮವನ್ನು 5 ಬಾರಿ ಮಾಡಿದ್ದು, ಎರಡು ಬಾರಿ ಜಿಲ್ಲೆಯ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜುಗಲ್ ಬಂದಿ ಕೆಲಸ ಗಡಿಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ.