ಚಾಮರಾಜನಗರ: ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಗಂಟಲು ದ್ರವ ಪರೀಕ್ಷೆಯನ್ನು ಜಾಸ್ತಿ ಮಾಡುತ್ತಿರುವುದರಿಂದ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಆಸ್ಪತ್ರೆ ಮಾಡಲಾಗುತ್ತಿದೆ. ಜೊತೆಗೆ, ಜೆಎಸ್ಎಸ್ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಹಣ ಬಳಸಲು 3.30 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅಗತ್ಯವಾಗಿರುವುದರಿಂದ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಲಾಕ್ಡೌನ್ ವೇಳೆಯಲ್ಲಿ ಅಂತಾರಾಜ್ಯ ಗಡಿಗಳನ್ನು ಬಿಗಿಗೊಳಿಸಿದಂತೆ ಮತ್ತೆ ಗಡಿಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ಈಗ ಜಿಲ್ಲೆಗೆ ಸೋಂಕಿನ ಪ್ರಕರಣ ಬೇರೆ ರಾಜ್ಯದಿಂದ ಬಂದಿರುವುದರಿಂದ ಗಡಿಗಳಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಜನರು ಮನೆಯಿಂದ ಹೊರಬಂದಾಗ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಅನಗತ್ಯ ಓಡಾಡ ನಿಲ್ಲಿಸುವುದೇ ಕೊರೊನಾ ಮಹಾಮಾರಿಗೆ ರಾಮಬಾಣ. ಜನಪ್ರತಿನಿಧಿಗಳು ಮತ್ತು ವರ್ತಕರು ಸಂಜೆ ಬಳಿಕ ಕರ್ಫ್ಯೂಗೆ ಒಲವು ತೋರಿರುವುದರಿಂದ ಈ ಕುರಿತು ಚಿಂತಿಸಲಾಗುವುದು ಎಂದರು.