ಚಾಮರಾಜನಗರ: ಸಚಿವರ ಆಗಮನಕ್ಕಾಗಿ ಕಾದು ನಿಂತಿದ್ದ ವರುಣಾ ಶಾಸಕ ಯತೀಂದ್ರ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರನ್ನು ಕಾಲೆಳೆದ ಘಟನೆ ಸುತ್ತೂರಿನಲ್ಲಿ ನಡೆಯಿತು.
ಸಚಿವ ಸೋಮಶೇಖರ್ ಕಾರಿನಿಂದ ಇಳಿದ ಕೂಡಲೇ ಕಾಂಗ್ರೆಸ್ ಶಾಸಕರನ್ನು ಕಂಡು 'ಹೀಗೆ ನಿಂತಿದ್ದೀರಿ, ನಿಮ್ಮನ್ನು ನೋಡಿದರೆ ನನಗೆ ಭಯ ಆಗ್ತಿದೆ' ಎಂದು ಕಿಚಾಯಿಸಿದರು. ಅದಕ್ಕೆ, 'ನಿಮ್ಮನ್ನು ಸ್ವಾಗತ ಮಾಡಬೇಕಲ್ಲಾ ಸರ್, ಹಾರ ಹಾಕಬೇಡಿ ಎಂದು ನಿಮ್ಮ ಸರ್ಕಾರವೇ ಆದೇಶ ಮಾಡಿದೆ, ಪುಸ್ತಕ ಕೊಡಿ ಅಂದರೆ ನಾನ್ಯಾವ ಪುಸ್ತಕ ಕೊಡಲಿ, ಬೇಕಾದರೆ ಯೋಜನೆಗಳ ಎಸ್ಟಿಮೇಟ್ ಪುಸ್ತಕ ಕೊಡ್ತೀನಿ' ಎಂದು ಶಾಸಕ ಪುಟ್ಟರಂಗಶೆಟ್ಟಿ ಸಚಿವರಿಗೆ ಟಾಂಗ್ ಕೊಟ್ಟರು.
ಪುಟ್ಟರಂಗಶೆಟ್ಟಿ ಮಾತಿನಿಂದ ಸುಮ್ಮನಾದ ಸಚಿವ ಸೋಮಶೇಖರ್, ಅದು ಸರ್ಕಾರಿ ಕಾರ್ಯಕ್ರಮಗಳಿಗೆ, ಆಯ್ತು ಬನ್ನಿ ಎಂದು ಶಾಸಕರನ್ನು ಕರೆದುಕೊಂಡು ಒಳನಡೆದರು.
ರಾಜಕಾರಣಿಗಳಾಗಲ್ಲ ಎಂದ ಮಕ್ಕಳು..
ಕೊರೊನಾ ಭೀತಿ ನಡುವೆ ಕಾರ್ಯಾರಂಭವಾಗಿರುವ ಶಾಲೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಚಾಮರಾಜನಗರ ತಾಲೂಕಿನ ಬದನಗುಪ್ಪೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ವೇಳೆ, ವಿದ್ಯಾರ್ಥಿಗಳನ್ನು ಯಾರಿಗೆ ರಾಜಕಾರಣಿಗಳಾಗಲು ಇಷ್ಟವಿದೆ ಎಂದು ಸಚಿವರು ಕೇಳಿದ್ದಕ್ಕೆ ಓರ್ವ ವಿದ್ಯಾರ್ಥಿಯೂ ಆಸಕ್ತಿ ತೋರಲಿಲ್ಲ. ಇದಾದ ಬಳಿಕ, ಡಾಕ್ಟರ್, ಇಂಜಿನಿಯರ್ ಆಗಲು ಯಾರಿಗೆ ಇಷ್ಟವಿದೆ ಎಂದು ಕೇಳಿದ್ದೇ ತಡ ತಾಮುಂದು-ನಾಮುಂದು ಎಂಬಂತೆ ಕೈ ಎತ್ತಿದ್ದರು.
ಇನ್ನು, ಆನ್ಲೈನ್ ತರಗತಿ ಇಷ್ಟವೆ?, ಅಥವಾ ಭೌತಿಕ ತರಗತಿ ಇಷ್ಟವೆ? ಎಂದು ಕೇಳಿದ್ದಕ್ಕೆ ಶಾಲೆಗೆ ಬಂದು ಕಲಿಯುವುದೇ ಇಷ್ಟ. ಇಲ್ಲಿಗೆ ಬಂದರೆ ಸಂತೋಷ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಇದಾದ ಬಳಿಕ, ಸಚಿವರು ವಿದ್ಯಾರ್ಥಿಗಳಿಗೆ ಈ ಸಾಲಿನ ಪಠ್ಯ ಪುಸ್ತಕ ವಿತರಿಸಿ, ಯಾವುದಕ್ಕೂ ಹೆದರಬೇಡಿ, ನಿರಾಂತಕದಿಂದ ಕಲಿಯಿರಿ ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಹೊಸ ದಾಖಲೆ ಬರೆದ ಭಾರತ