ಚಾಮರಾಜನಗರ: ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಣೆಯ ವೇಳೆ ಕಪಾಳಮೋಕ್ಷ ಮಾಡಿದರೆಂಬ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆ ಕೆಂಪಮ್ಮ ಸಂಘಟನೆಗಳ ವಿರುದ್ದ ದೂರು ಕೊಟ್ಟಿದ್ದು ಎಫ್ಐಆರ್ ದಾಖಲಾಗಿದೆ.
ಸಚಿವ ವಿ.ಸೋಮಣ್ಣ ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಬಿಂಬಿಸಿ ಹಲವು ಸಂಘಟನೆಗಳು ಮನೆ ಮುಂದೆ ಬಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಕಾರಣದಿಂದ ನನಗೆ ರಕ್ಷಣೆ ಕೊಡಿ ಎಂದು ಹಾಗು ಕಿರುಕುಳ ನೀಡುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
ಕೆಂಪಮ್ಮ ಮಾತನಾಡಿ, ಗ್ರಾ.ಪಂ ವತಿಯಿಂದ ನಿವೇಶನ ಹಂಚಿಕೆ ವಿಚಾರವಾಗಿ ನನ್ನ ಹೆಸರನ್ನು ಕೈಬಿಡಲಾಗಿತ್ತು. ಈ ಕಾರಣದಿಂದ ನಿವೇಶನ ಕೊಡಿ. ಗಂಡ ಇಲ್ಲದವಳು, ಮನೆ ಇಲ್ಲದ ಕಾರಣ ನನಗೂ ನಿವೇಶನದ ಹಕ್ಕು ಪತ್ರ ಬೇಕು ಎಂದು ವೇದಿಕೆ ಮೇಲೇರಿದೆ. ಪಕ್ಕದಲ್ಲಿ ನಿಂತು ನನ್ನನ್ನು ತಡೆಯಲು ಬಂದುವರನ್ನು ಸುಮ್ಮನಿರಿ ಎಂದು ಹೇಳಿ, ಸಚಿವರೇ ನನ್ನನ್ನು ಕರೆದರು. ವಿಷಯ ತಿಳಿಸಿ ಕಾಲಿಗೆ ಬೀಳಲು ಹೋದಾಗ ಕೆನ್ನೆ ಸವರಿ ಸಚಿವರು ನನ್ನನ್ನು ಸಮಾಧಾನ ಮಾಡಿದರು. ಕಣ್ಣೀರು ಹಾಕಬೇಡ ಸುಮ್ಮನಿರು, ಮಗಳೇ ಎಂದು ಸಂತೈಸಿದರು. ನನಗೆ ಸಚಿವರು ಹೊಡೆದಿಲ್ಲ ಎಂದು ಮತ್ತೆ ಸ್ಪಷ್ಟನೆ ನೀಡಿದರು.
ನಿವೇಶನಕ್ಕಾಗಿ ನಾನು ಕೆಲ ದಾಖಲಾತಿಗಳನ್ನು ಸಲ್ಲಿಸಿರಲಿಲ್ಲ. ಘಟನೆಯ ನಂತರ ಬಾಕಿ ಇದ್ದ ಜಾತಿ ಪ್ರಮಾಣ ಪತ್ರದ ಕೊಟ್ಟ ಕೂಡಲೇ ನನಗೆ ಮಾರನೇ ದಿನ ನಿವೇಶನ ಕೊಡುವ ವ್ಯವಸ್ಥೆಯನ್ನು ಸಚಿವರು ಮಾಡಿಸಿದರು. ಇದಾದ ನಂತರ ಕೆಲ ಸಂಘಟನೆಯವರು ಎಂದು ಹೇಳಿಕೊಂಡು ಮನೆಗೆ ಬಂದು ಕಿರುಕುಳ ಕೊಡುತ್ತಿದ್ದಾರೆ. ನೀನು ಕೋಟ್ಯಧಿಪತಿ ಆಗಬಹುದು. ಕೇಸು ಕೊಡು ಅಂತ ಒತ್ತಾಯಿಸುತ್ತಾರೆ. ಈ ಕಾರಣದಿಂದ ಕೂಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಕೇಸು ಕೊಡು ಎಂದು ಬಲವಂತ ಮಾಡುತ್ತಿದ್ದ ಕಾರಣ ಸಂಘಟನೆಗಳ ವಿರುದ್ಧವೇ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಂಗಳವಾರ ಕೇಸು ಕೊಟ್ಟಿದ್ದೇನೆ ಎಂದು ಕೆಂಪಮ್ಮ ತಿಳಿಸಿದರು.
ಮಹಿಳೆ ಕೊಟ್ಟ ದೂರು ಆಧರಿಸಿ ರೈತ ಸಂಘ, ನಾಯಕ ಹಿತ ರಕ್ಷಣಾ ವೇದಿಕೆ, ಮಹಿಳಾ ಸಂಘಟನೆ, ಡಿಎಸ್ಎಸ್, ಕೆ ಆರ್ ಎಸ್ ಪಕ್ಷದ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಘಟನೆ.. ಸಚಿವ ಸೋಮಣ್ಣ ಕ್ಷಮೆಯಾಚನೆ