ಚಾಮರಾಜನಗರ : ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ಮುದ್ದನಾಯಕ(55) ಮೃತ ದುರ್ದೈವಿ. ಇಂದು ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ವಜಾತಿಯ ಮುಖಂಡರೇ ಸಾಮಾಜಿಕ ಬಹಿಷ್ಕಾರ ಹಾಕುತ್ತೇವೆಂದು ಬೆದರಿಸಿದ್ದರು ಎಂಬ ಆರೋಪವೂ ಇದೆ.
ಘಟನೆ ವಿವರ : ಮೃತ ಮುದ್ದನಾಯಕರ ಮಗಳಾದ ಶಿಲ್ಪಾಳನ್ನು ಅದೇ ಗ್ರಾಮದ ಮಹೇಶ್ ಎಂಬಾತನ ಜೊತೆಗೆ ಮದುವೆ ಮಾಡಿ ಕೊಡಲಾಗಿತ್ತು. ಕೆಲ ವರ್ಷಗಳ ನಂತರ ಕೌಟುಂಬಿಕ ಕಲಹ ಏರ್ಪಟ್ಟು ಇಬ್ಬರ ನ್ಯಾಯ ತೀರ್ಮಾನ ಪಂಚಾಯತ್ ಮುಂದೆ ಬಂದಿತ್ತು.
ಗ್ರಾಮದ ಹಿರಿಯ ಯಜಮಾನ ಶೇಖರ್ ಮಹೇಶ್ ಸಂಬಂಧಿಯಾದ ಹಿನ್ನೆಲೆಯಲ್ಲಿ ಅವರ ಪರವಾಗಿ ನ್ಯಾಯ ಹೇಳಿ, ನನ್ನ ತೀರ್ಮಾನವೇ ಅಂತಿಮ. ಇದನ್ನು ಮೀರಿ ಯಾರು ಠಾಣೆ ಮೆಟ್ಟಿಲು ಏರಬಾರದು. ಒಂದು ವೇಳೆ ಮಾತು ಮೀರಿ ಹೋದರೆ ಅಂತವರಿಗೆ ಒಂದು ಲಕ್ಷ ರೂ. ದಂಡ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಿ ಊರಿನಿಂದ ಹೊರಗೆ ಕಳುಹಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ.
ಸೋಮವಾರ ಶಿಲ್ಪ ಮತ್ತೆ ಗಂಡನ ಮನೆಗೆ ಹೋದ ವೇಳೆ ಕುಟುಂಬದವರ ಜೊತೆ ಗಲಾಟೆ ನಡೆದಿದೆ. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಗ್ರಾಮದ ಹಿರಿಯ ಯಜಮಾನ ಶೇಖರ್, ಶಿಲ್ಪಳಿಗೆ ಮನ ಬಂದಂತೆ ಬೈದು ಮನೆಯಿಂದ ಹೊರ ದೂಡಿದ್ದಾನೆ. ಮರುದಿನ ಮಂಗಳವಾರ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ಯಾರು ಗಲಾಟೆ ಮಾಡಬಾರದು ಎಂದು ಎಚ್ಚರಿಸಿದ್ದರು.
ನಂತರ ಅದೇ ಸಂಜೆ ಶೇಖರ್ ಉದ್ರಿಕ್ತನಾಗಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಮುದ್ದನಾಯಕ ಮನೆ ಮುಂದೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದ ಮುದ್ದನಾಯಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ. ಘಟನೆ ಸಂಬಂಧ ಗ್ರಾಮದ ಹಿರಿಯ ಶೇಖರ್, ಸಂತೋಷ್, ವಿಜಯಕುಮಾರ್, ಮಹೇಶ್, ಚಿತ್ರ, ಸುರೇಶ್ ಸೇರಿದಂತೆ 6 ಮಂದಿ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಹಿಷ್ಕಾರ ಪ್ರಕರಣ : ಮಾಧ್ಯಮಗಳ ಮುಂದೆ ಹೋಗಿದ್ದಕ್ಕೆ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪ
ಇದನ್ನೂ ಓದಿ: ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: 25 ಸಾವಿರ ರೂಪಾಯಿ ದಂಡ