ಚಾಮರಾಜನಗರ: ವಿವಿಧ ಕಾರಣಗಳಿಗಳಿಂದ ತೆರವಾಗಿದ್ದ ಹರದನಹಳ್ಳಿ ಜಿ. ಪಂ. ಕ್ಷೇತ್ರ, ಯರಿಯೂರು ತಾ.ಪಂ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಹರದನಹಳ್ಳಿ ಜಿ.ಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ 2681 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರನ್ನು ಸೋಲಿಸಿದ್ದಾರೆ. ಈ ಚುನಾವಣೆಯನ್ನು ಶಾಸಕ ಪುಟ್ಟರಂಗಶೆಟ್ಟಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು.
ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾ ಸುಬ್ಬಣ್ಣ ಜಯ ಸಾಧಿಸಿದ್ದಾರೆ. ತಾ.ಪಂ. ಕಚೇರಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಸುಮಾ ಸುಬ್ಬಣ್ಣ 475 ಮತ, ಬಿಜೆಪಿ ಅಭ್ಯರ್ಥಿ 302 ಮತ, ಎನ್.ಮಹೇಶ್ ಬೆಂಬಲಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸರಸ್ವತಿ ನಾಗರಾಜು 192 ಮತಗಳನ್ನು ಪಡೆದಿದ್ದು, ಬಿ ಎಸ್ ಪಿ ಅಭ್ಯರ್ಥಿ ಮಂಜುಳಾ 5 ಮತ ಪಡೆದಿದ್ದಾರೆ.
ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಎನ್.ಮಹೇಶ್ ಅವರಿಗೆ ಮುಖಭಂಗವಾಗಿದ್ದು ಒಂದೆಡೆಯಾದರೇ ಮಹೇಶ್ ಇಲ್ಲದ ಬಿಎಸ್ಪಿ ಕೇವಲ 5 ಮತಗಳಿಗಷ್ಟೇ ತೃಪ್ತಿ ಪಡಬೇಕಾಗಿದೆ. ಇನ್ನು ಯಳಂದೂರು ತಾಪಂನ ಯರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಣಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಣಿ 2874 ಮತಗಳನ್ನು ಗಳಿಸಿದ್ದರೆ ಬಿಜೆಪಿಯ ಗೋವಿಂದರಾಜು 1730 ಮತಗಳನ್ನು ಪಡೆದು ಸೋತಿದ್ದಾರೆ.