ಚಾಮರಾಜನಗರ/ಮೈಸೂರು: ಬೆಳಗ್ಗೆಯ ದಿನಪತ್ರಿಕೆ ಸಂಜೆ ಹೊತ್ತಿಗೇ ರದ್ದಿಯಾಗಲಿದೆ ಎಂಬುವುದಕ್ಕೆ ಅಪವಾದಂತೆ ಕಳೆದ 73 ವರ್ಷಗಳಿಂದ ಈ ರೈತ ಕುಟುಂಬ ಎಚ್.ಎಸ್.ದೊರೆಸ್ವಾಮಿ ಅವರ ಪತ್ರಿಕೆಯೊಂದನ್ನು ಕಾಪಿಟ್ಟುಕೊಂಡು ಬರುತ್ತಿದ್ದಾರೆ.
ಹೌದು..., ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಚಿದರಹಳ್ಳಿ ಗ್ರಾಮದ ರೈತ ನಾಗೇಂದ್ರ ಎಂಬವರ ಕುಟಂಬವು ಎಚ್.ಎಸ್.ದೊರೆಸ್ವಾಮಿ ಸಂಪಾದಕತ್ವದಲ್ಲಿ ಮೂಡಿಬಂದಿದ್ದ 1948 ರ ಆಗಸ್ಟ್ 8 ರ ಪೌರವಾಣಿ ಪತ್ರಿಕೆಯ ಸಂಚಿಕೆಯೊಂದನ್ನು ಅಮೂಲ್ಯ ರತ್ನದಂತೆ ಕಾಪಿಟ್ಟುಕೊಂಡು ಬರುತ್ತಿದ್ದಾರೆ.
ಪತ್ರಿಕೆಯಲ್ಲಿದ್ದ ಕಾಶ್ಮೀರ ಸಮಸ್ಯೆ, ಮೈಸೂರು ಸಂಸ್ಥಾನದ ಸುದ್ದಿಗಳ ಬರವಣಿಗೆ ಕಂಡು ತಂದೆ ತಂದಿಟ್ಟಿದ್ದ ಪತ್ರಿಕೆಯನ್ನು ರಕ್ಷಿಸಿಕೊಂಡು ಬರುತ್ತಿದ್ದು, ಈಗ ನಾಗೇಂದ್ರ ಅವರ ಮಗ ಪವನ್ ಕೂಡ ಎಚ್.ಎಸ್.ದೊರೆಸ್ವಾಮಿ ಅವರ ಮೇಲಿನ ಗೌರವ, ಪ್ರೀತಿಯಿಂದ ಪತ್ರಿಕೆಯನ್ನು ಜೋಪಾನ ಮಾಡುತ್ತಿದ್ದಾರೆ. ಈ ಹಿಂದೆ ದಿನಪತ್ರಿಕೆಗಳು ಹಳ್ಳಿಗಳಲ್ಲಿರುವ ಓದುಗರಿಗೆ ತಲುಪಲು ಮೂರು - ನಾಲ್ಕು ದಿನಗಳೇ ಬೇಕಾಗುತ್ತಿತ್ತು. ತನ್ನ ತಾತ ಆ ಹಳೇ ಪತ್ರಿಕೆಯನ್ನು ಕಪಾಟಿನಲ್ಲಿಟ್ಟಿದ್ದರು. ಇದಾದ ಬಳಿಕ, ತನ್ನ ತಂದೆ ಕಪಾಟಿನಲ್ಲಿದ್ದ ಪತ್ರಿಕೆಯಲ್ಲಿನ ಲೇಖನಗಳನ್ನು ಕಂಡು ರಕ್ಷಿಸಿಸುತ್ತಿದ್ದಾರೆ.
ನನಗೂ ದೊರೆಸ್ವಾಮಿ ಅವರನ್ನು ಕಂಡರೆ ಗೌರವ ಮತ್ತು ಪ್ರೇರಕ ಶಕ್ತಿಯಾಗಿರುವುದರಿಂದ ಆ ಪತ್ರಿಕೆಯನ್ನು ಜೋಪಾನವಾಗಿಟ್ಟಿದ್ದೇನೆ. ಇಷ್ಟೇ ಅಲ್ಲದೇ ನಮ್ಮ ಮನೆಯಲ್ಲಿ ಮೈಸೂರು ಜನಪ್ರತಿನಿಧಿ ಸಭೆ ಗೆಜೆಟಿಯರ್ಸ್, ಕೆಆರ್ಎಸ್ ಅಣೆಕಟ್ಟಿನ ಖರ್ಚು ವೆಚ್ಚದ ಪತ್ರಿಕೆಗಳು ಕೂಡ ನಮ್ಮ ಮನೆಯಲ್ಲಿದೆ ಎಂದು ಚಿದರಹಳ್ಳಿ ಪವನ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಎಚ್.ಎಸ್.ದೊರೆಸ್ವಾಮಿ ಅವರು ತಮ್ಮಶತಾಯುಷಿ ಬದುಕನ್ನು ಇಂದು ಮುಗಿಸಿದ್ದರೂ ಅವರ ಪತ್ರಿಕೆ ಮಾತ್ರ ಚಿರಾಯುವನ್ನಾಗಿಸಿದೆ ಈ ರೈತ ಕುಟುಂಬ.