ಚಾಮರಾಜನಗರ: ಬಿಪಿಎಲ್ ಕಾರ್ಡ್ ಕುರಿತು ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಕನ್ನಡಪರ ಹೋರಾಟಗಾರರು ಸಚಿವ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ಟೊಮೇಟೊ, ಮೊಟ್ಟೆ ಹೊಡೆದು ಆಕ್ರೋಶ ಹೊರಹಾಕಿದ ಘಟನೆ ನಗರದಲ್ಲಿ ನಡೆಯಿತು.
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಮೇಶ್ ಕತ್ತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಚಿವರಾದವರಿಗೆ ಕನಿಷ್ಠ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಟಿವಿ, ಬೈಕ್ ಇಟ್ಟುಕೊಂಡವರ ಪಡಿತರ ಚೀಟಿ ರದ್ದು ಮಾಡುತ್ತೇವೆಂದು ಹೇಳಿದರೆ ಕರ್ನಾಟಕದ ಶೇಕಡ 95ರಷ್ಟು ಬಡಕುಟುಂಬಗಳು ಪಡಿತರ ಚೀಟಿಯಿಂದ ವಂಚಿತವಾಗುತ್ತವೆ ಎಂದು ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ: ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆಯಿಲ್ಲ; ಉಮೇಶ್ ಕತ್ತಿ
ಟಿವಿ, ಬೈಕ್ ಇಂದು ಕಡುಬಡವರ ಮನೆಯಲ್ಲೂ ಇರುವ ವಸ್ತುಗಳಾಗಿದೆ. ಪಡಿತರ ಚೀಟಿಗೆ ಅವೈಜ್ಞಾನಿಕ ಮಾನದಂಡಗಳನ್ನು ಹೇರಲು ಸರ್ಕಾರ ಹೊರಟಂತಿದೆ. ಬಡವರ ವಿರೋಧಿ ಕೆಲಸ ಮಾಡುವ ಬದಲು ಅಭಿವೃದ್ಧಿ ಮಾಡಲಿ, ಇಲ್ಲದಿದ್ದರೆ ನಿರಂತರ ಹೋರಾಟ ನಡೆಸುತ್ತೇವೆಂದು ಪ್ರತಿಭಟನಾಕಾರರು ಎಚ್ಚರಿಸಿದರು.