ಚಾಮರಾಜನಗರ: ಕೊರೊನಾ ಕಾರಣದಿಂದ ಮುಂದೂಡಿದ್ದ ಐಟಿಐ ಪರೀಕ್ಷೆಗಳನ್ನು ಕಂಪ್ಯೂಟರ್ ಬೇಸ್ಡ್ ಟೆಸ್ಟ್ಅನ್ನು ಆನ್ ಲೈನ್ ಮೂಲಕ ಮಾಡಲು ಮುಂದಾಗಿ ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳು ಅತಂತ್ರರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ರಾಜ್ಯದಲ್ಲಿ 250 ಸರ್ಕಾರಿ, 196 ಅನುದಾನಿತ, 1300 ಖಾಸಗಿ ಸೇರಿದಂತೆ 1700 ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿದ್ದು, ಕೊರೊನಾ ಕಾರಣದಿಂದ ಕಳೆದ ವರ್ಷ ಆಗಸ್ಟ್ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಉಳಿದ ಪರೀಕ್ಷೆಗಳನ್ನು ಆನ್ಲೈನ್ ಮೂಲಕ ನಡೆಸಲು ಯಾವುದೇ ನೋಟಿಫಿಕೇಶನ್ ನೀಡದೇ ದಿಢೀರನೇ ನಿಶ್ಚಯಿಸಿ, ಎನ್ಸಿಆರ್ಟಿ ಎಡವಟ್ಟು ಮಾಡಿಕೊಂಡಿದೆ.
ರಾತ್ರೋರಾತ್ರಿ ಆನ್ ಲೈನ್ ಮೂಲಕ ಪರೀಕ್ಷಾ ಶುಲ್ಕ ಕಟ್ಟಲು ವಿದ್ಯಾರ್ಥಿಗಳಿಗೆ ಸೂಚಿಸಿ ಕೇವಲ ಒಂದು ದಿನ ಕಾಲಾವಕಾಶ ನೀಡಿತ್ತು. ಆನ್ಲೈನ್ ಮೂಲಕ ಶುಲ್ಕ ಕಟ್ಟಿದ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಜನರೇಟ್ ಆಗಿದೆ. ಮತ್ತಷ್ಟು ಮಂದಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ. ಹಾಲ್ ಟಿಕೆಟ್ ಸಿಕ್ಕವರಿಗೆ ಇಂದು ಮತ್ತು ನಿನ್ನೆ ನಡೆದ ಪರೀಕ್ಷೆಯಲ್ಲಿ ಕೆಲವರಿಗೆ ಪ್ರಶ್ನೆಗಳು ಬಂದರೆ ಮತ್ತೇ ಕೆಲವರಿಗೆ ನೆಟ್ವರ್ಕ್ ಸಮಸ್ಯೆಯಿಂದ ಲಾಗಿನ್ ಆಗಲು ಸಾಧ್ಯವಾಗಿಲ್ಲ ಎಂದು ಜೆಎಸ್ಎಸ್ ಕಾಲೇಜಿನ ಶಶಿಧರ್ ತಿಳಿಸಿದರು.
ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಲ್ಯಾಪ್ಟಾಪ್ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದು, ಪರೀಕ್ಷೆ ಪ್ರಕ್ರಿಯೆಯೇ ನಪಾಸಾಗಿದ್ದರಿಂದ ಮತ್ತೊಂದು ದಿನಾಂಕ ಗೊತ್ತುಪಡಿಸುವುದಾಗಿ ಎನ್ಸಿಆರ್ಟಿ ತಿಳಿಸಿದೆ. ಮತ್ತೊಂದು ವಿಪರ್ಯಾಸವೆಂದರೆ ಎರಡು ದಿನ ಪರೀಕ್ಷೆ ನಡೆದಿರುವುದಾಗಿ ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ತಿಳಿದಿಲ್ಲ ಎಂದು ಕಾಲೇಜು ಮೂಲಗಳು ಹೇಳಿವೆ.
ಇದನ್ನು ಓದಿ: ಜೆಡಿಎಸ್ಗೆ ಸಭಾಪತಿ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಷಡ್ಯಂತ್ರ: ಹೆಚ್ಡಿಕೆ ಆರೋಪ