ಚಾಮರಾಜನಗರ: ಜಿಲ್ಲೆಯಲ್ಲಿ ಮೂರು ಅಪಘಾತ ಹಾಗೂ ಒಂದು ನೀರಿನ ಅವಘಡ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು 4 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಆಟೋವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆ ಪ್ರಯಾಣಿಕ ಮೃತಪಟ್ಟಿದ್ದಾರೆ. ಮೃತರನ್ನು ಕೋಡಿಮೋಳೆ ಗ್ರಾಮದ ಗಣೇಶ್ ಶೆಟ್ಟಿ (55) ಎಂದು ಗುರುತಿಸಲಾಗಿದೆ. ಅತಿವೇಗವಾಗಿ ಆಟೋ ಚಲಾಯಿಸುತ್ತಿದ್ದರಿಂದ ಬ್ಯಾರಿಕೇಡ್ಗೆ ಡಿಕ್ಕಿ ತಪ್ಪಿಸಲು ಹೋಗಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಹಬ್ಬದ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಆಯತಪ್ಪಿ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ. ಕರಳುಮೋಳೆ ಗ್ರಾಮದ ಸ್ವಾಮಿ (35) ಮೃತರು ಎಂದು ತಿಳಿದುಬಂದಿದೆ.
ಮತ್ತೊಂದೆಡೆ ನಿಂತಿದ್ದ ಈಚರ್ ಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಾಮರಾಜನಗರದ ಪಾಲಿಟೆಕ್ನಿಕ್ ಕಾಲೇಜು ಬಳಿ ಸಂಭವಿಸಿದೆ. ಚಾಲಕ ಫೋನಿನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಪ್ರಯಾಣಿಕರು ದೂರಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ.. ದೀಪಾವಳಿ ಹಬ್ಬದಂದೇ ಪ್ರಾಣಬಿಟ್ಟ ಮೂವರು
ಕಾಲು ಜಾರಿ ಬಿದ್ದು ವ್ಯಕ್ತಿ ಸಾವು: ಗುಂಡ್ಲುಪೇಟೆ ಪಟ್ಟಣದ ಸಮೀಪದ ಅಮಾನಿಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಗುಂಡ್ಲುಪೇಟೆಕೆ.ಎಸ್. ನಾಗರತ್ನ ಬಡಾವಣೆಯ ರಾಜು (35) ಮೃತರು. ಕೆರೆಯಲ್ಲಿ ಸ್ನಾನ ಮಾಡಿ ಕಾಲುವೆ ಬಳಿ ಬಟ್ಟೆ ಒಗೆಯಲು ನೀರು ಹರಿಯುವ ಹಳ್ಳಕ್ಕೆ ಇಳಿದಾಗ ಕೆರೆಯ ಕೇಸರಿನಲ್ಲಿ ಕಾಲು ಸಿಕ್ಕಿಕೊಂಡು ಮೇಲೆ ಬರಲಾಗದೆ ಕೆರೆಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.