ಕೊಳ್ಳೇಗಾಲ (ಚಾಮರಾಜನಗರ): ಇತ್ತ ಎಲ್ಲಾ ಇಲಾಖೆಗಳು ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಹೋರಾಟ ನಡೆಸುತ್ತಿದ್ದರೆ, ಇದೇ ಸಮಯವನ್ನೇ ಬಳಸಿಕೊಂಡ ಮರಳುಗಳ್ಳರು ರಾಜರೋಷವಾಗಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಮರಳು ಸಂಗ್ರಹಿಸಿಕೊಂಡು ರಾತ್ರಿಯಾಗುತ್ತಿದ್ದಂತೆ ಮರಳು ಸಾಗಿಸಲಾಗುತ್ತಿದೆ.
ಕೊಳ್ಳೇಗಾಲ ತಾಲೂಕಿನ ದಾಸನಪುರ, ಮುಳ್ಳೂರು, ಹರಳೆ, ಹಂಪಾಪುರ, ಸರಗೂರು ಗ್ರಾಮಗಳ ಕಾವೇರಿ ನದಿಯಲ್ಲಿ ದಿನನಿತ್ಯ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು, ಎತ್ತಿನಗಾಡಿ ಹಾಗೂ ಬೈಕ್ಗಳಲ್ಲಿ ರಾತ್ರೋರಾತ್ರಿ ಮರಳು ಸಾಗಾಟವಾಗುತ್ತಿದೆ.
ಸರ್ಕಾರ ಅಕ್ರಮ ಮರಳುಗಾರಿಕೆ ಮೇಲೆ ನಿರ್ಬಂಧ ಹೇರಿದೆ. ಜೊತೆಗೆ ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಿಸುವುದನ್ನು ತಡೆ ಹಿಡಿದಿದೆ. ಆದರೆ, ತಾಲೂಕಿನ ಕೆಲ ಗ್ರಾಮಗಳಲ್ಲಿ ಸರ್ಕಾರದ ಯಾವ ಆದೇಶವನ್ನೂ ಪಾಲಿಸುತ್ತಿಲ್ಲ. ಪೊಲೀಸ್ ಇಲಾಖೆ ಕೆಲವೊಂದಷ್ಟು ಅಕ್ರಮ ಮರಳು ಸಾಗಣಿಯನ್ನು ಬಯಲಿಗೆಳೆದರೂ ಕ್ಯಾರೆ ಎನ್ನದ ಮರಳುಗಳ್ಳರು, ನಿರಂತರ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಅಣಗಳ್ಳಿ ಬಸವರಾಜು, ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್, ಕಂದಾಯ ಇಲಾಖೆಗಳು ವಿಫಲವಾಗಿವೆ. ಅಕ್ರಮ ಮರಳುಗಾರಿಕೆ ಕಂಡರೂ ಕಾಣದಂತೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಮೂರು ಇಲಾಖೆಗಳು ಮೌನ ವಹಿಸಿರುವುದು ಹಲವು ಸಂಶಯ ಮೂಡಿಸಿದೆ. ಈ ದಂಧೆಗೆ ತೆರೆ ಬೀಳುವುದು ಯಾವಾಗ ಎಂದು ತಿಳಿಯುತ್ತಿಲ್ಲ. ಇದೇ ರೀತಿ ಮುಂದುವರೆದರೆ ನಮ್ಮ ಪ್ರಕೃತಿ ಉಳಿಸಿಕೊಳ್ಳಲು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.