ಚಾಮರಾಜನಗರ : ಯುಗಾದಿ ಹಬ್ಬದ ಪರಿಣಾಮ ಜೂಜಾಟ ಜಿಲ್ಲಾದ್ಯಂತ ನಡೆಯುತ್ತಿದೆ. ಪೊಲೀಸರು ಕ್ರಮ ಕೈಗೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡಹಗಲೇ ರಸ್ತೆಗಳು, ದೇವಾಲಯ, ಅರಳಿಕಟ್ಟೆ ಸೇರಿದಂತೆ ಹಲವೆಡೆ ಜೂಜಾಟ ನಡೆಯುತ್ತಿದೆ. ಕೆಲವೆಡೆ ಚೌಕಾಬಾರ, ಹೆಡ್ ಅಂಡ್ ಟೈಲ್ ಆಟವನ್ನು ಕಿರಿಯರು, ಮಹಿಳೆಯರು ಆಡುತ್ತಿದ್ದಾರೆ.
ಈ ಹಿಂದೆ ಕದ್ದುಮುಚ್ಚಿ ಜಮೀನುಗಳು, ಊರ ಹೊರಗಾಚೆ ಕೆಲವರಷ್ಟೇ ಜೂಜಾಟ ಆಡ್ತಿದ್ದರು. ಆದರೆ, ಹಬ್ಬದ ಹಿನ್ನೆಲೆ ರಾಜಾರೋಷವಾಗಿಯೇ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ. ಪೊಲೀಸರು ಕ್ರಮಕೈಗೊಳ್ಳಲಾಗದ ನಿಸ್ಸಹಾಯಕ ಸ್ಥಿತಿಯಲ್ಲಿದ್ದಾರೆ. ಇನ್ನು, ಈ ಬಗ್ಗೆ ಪೊಲೀಸ್ ಸಿಬ್ಬಂದಿಯೊಬ್ಬರು ಮಾತನಾಡಿ, ಹಬ್ಬ ಇದ್ದು ಜೂಜಾಟಕ್ಕೆ ಅವಕಾಶ ಕೊಡಬೇಕೆನ್ನುತ್ತಿದ್ದಾರೆ.
ಕೆಲವು ಗ್ರಾಮಗಳಿಗೆ ಕಾಲಿಡಲೇ ಆಗುತ್ತಿಲ್ಲ. ಈ ಹಿಂದೆ ಜೂಜಾಡಿ ಸಿಕ್ಕಿಬಿದ್ದಿದ್ದವರು, ಪೊಲೀಸರನ್ನು ಕಂಡರೇ ಓಡುತ್ತಿದ್ದವರು ರಾಜಾರೋಷವಾಗಿಯೇ ಜೂಜಾಡುತ್ತಿದ್ದು, ಲಕ್ಷಾಂತರ ರೂ. ಪಣಕ್ಕಿಟ್ಟು ಆಡುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.