ಚಾಮರಾಜನಗರ: ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಡೆದಿದೆ.
ಆಲುಮೇಲಯ್ಯ, ರಂಗಸ್ವಾಮಿ, ನಂಜಶೆಟ್ಟಿ, ಸಿದ್ದಯ್ಯ, ಚೆನ್ನನಾಯಕ, ನಾಗರಾಜು ಶೆಟ್ಟಿ, ಮಾದ ಶೆಟ್ಟಿ ಬಂಧಿತ ಆರೋಪಿಗಳು. ಚೆನ್ನಮಲ್ಲ, ಕೃಷ್ಣಪ್ಪ, ಮಹದೇವ, ಪ್ರಭು ತಲೆಮರೆಸಿಕೊಂಡ ಅಸಾಮಿಗಳಾಗಿದ್ದಾರೆ.
ಇಂದು ಮುಂಜಾನೆ ಹೊಸಗುಡ್ಡದ ಬಳಿ ಇಬ್ಬರು ಆಸಾಮಿಗಳು ವೇಗವಾಗಿ ಬೈಕ್ನಲ್ಲಿ ಹೋಗುತ್ತಿದ್ದವರನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಜಿಂಕೆ ಮಾಂಸ ಸಿಕ್ಕಿದೆ. ಬಂಧಿತರಿಂದ ಜಿಂಕೆಯ 50 ಕೆಜಿ ಮಾಂಸ, 1 ಬೈಕ್, ಒಂದು ಗಂಡು ಜಿಂಕೆ ಹಾಗೂ ಎರಡು ಹೆಣ್ಣು ಜಿಂಕೆಯ ತಲೆ ಹಾಗೂ 8 ಕಾಲು, 2 ಜಿಂಕೆಯ ಚರ್ಮ ,15 ಉರುಳುಗಳು, ನಾಡ ಬಂದೂಕು, 1 ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೇ ಪರಾರಿಯಾದವರಿಗಾಗಿ ಬಲೆ ಬೀಸಿದ್ದಾರೆ.