ಚಾಮರಾಜನಗರ : ಮಾಜಿ ಸಿಎಂ ಯಡಿಯೂರಪ್ಪನವರು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಕೊಳ್ಳೇಗಾಲ ಪಕ್ಷೇತರ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಮತ್ತು ನನ್ನ ಬೆಂಬಲಿಗರ ಅಭಿಪ್ರಾಯದಂತೆ ಹಾಗೂ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ರಾಜ್ಯಾಧ್ಯಕ್ಷ ಕಟೀಲ್ ಅವರ ಜೊತೆಯೂ ಮಾತನಾಡಿದ್ದು, ಅವರು ಪಕ್ಷಕ್ಕೆ ಸೇರಿಸಿಕೊಳ್ಳಲು ನೀಡಿದ ದಿನಾಂಕದಂದು ನಾನು ಬಿಜೆಪಿಗೆ ಸೇರುತ್ತೇನೆ ಎಂದರು.
ಇದೇ ವೇಳೆ, ತಾವು ಯಾವುದೇ ಷರತ್ತುಗಳನ್ನ ಹಾಕದೇ ಬಿಜೆಪಿಗೆ ಹೋಗುತ್ತಿರುವುದಾಗಿ, ಸಚಿವ ಸ್ಥಾನ ಏನನ್ನು ಕೇಳದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಸದನಕ್ಕೆ ಗೈರಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಅಂದಿನಿಂದಲೂ ಬಿಜೆಪಿಗೆ ಸೇರುತ್ತಾರೆಂಬ ಗುಲ್ಲಿತ್ತು, ಈಗ ಅದು ದಿಟವಾಗಿದೆ.