ಚಾಮರಾಜನಗರ: ಹನೂರಿನ ವಿವಿಧೆಡೆ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಬೇಟೆಗಾರರನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಎಡಳ್ಳಿ ದೊಡ್ಡಿ ಸಮೀಪ ನಡೆದಿದೆ.

ಬೆಂಗಳೂರು ಮೂಲದ ಮಂಜುನಾಥ್, ಬಾಲರಾಜು ಹಾಗೂ ಜೋಸೆಫ್ ಬಂಧಿತರು. ಸಿಇಎನ್ ಪಿಐ ಮಹಾದೇವಶೆಟ್ಟಿ ಗಸ್ತಿನಲ್ಲಿದ್ದಾಗ ಇಂದು ಬೆಳಗಿನ ಜಾವ ಕಾರಿನಲ್ಲಿ ಬರುತ್ತಿದ್ದ ಇವರನ್ನು ಪರಿಶೀಲಿಸಿದಾಗ ಅಕ್ರಮ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ. ಹನೂರು ಭಾಗದಲ್ಲಿ ಬೇಟೆಯಾಡಿ ಬೆಂಗಳೂರಲ್ಲಿ ಇವರು ಮಾಂಸ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ: ಇಬ್ಬರು ಕಿಮ್ಸ್ಗೆ ದಾಖಲು
ಬಂಧಿತರಿಂದ ಒಂದು ನಾಡ ಬಂದೂಕು, ಬ್ಯಾಟರಿ, ಮಚ್ಚು, ಸಿಡಿಮದ್ದುಗಳು, ಗುಂಡುಗಳು, ಎರಡು ಕಾಡುಹಂದಿ ಮಾಂಸ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆಗೆ ಮೂವರನ್ನು ಹನೂರು ಪೊಲೀಸರ ವಶಕ್ಕೊಪ್ಪಿಸಿ ಪ್ರಕರಣ ದಾಖಲಿಸಲಾಗಿದೆ.