ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪುಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಗ್ರಾಮದ ಹಳ್ಳ ತುಂಬಿದ್ದು ಹಗ್ಗ ಕಟ್ಟಿ ಜನರು ಹಳ್ಳ ದಾಟಬೇಕಿದೆ. ಕಳೆದ 3 ದಶಕಗಳಿಂದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಪ್ರಾಣಭಯದಲ್ಲೇ ಹಳ್ಳ ದಾಟಬೇಕಾದ ಪರಿಸ್ಥಿತಿ ಇದೆೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹನೂರಿನ ಕಟ್ಟಕಡೆಯ ಗ್ರಾಮವಾದ ಮೀಣ್ಯಂ ಸಮೀಪದ ಹಳ್ಳದಾಚೆ ಇರುವ ಪುಟ್ಟೇಗೌಡನದೊಡ್ಡಿಯಲ್ಲಿ ಸರಿಸುಮಾರು 100 ಮನೆಗಳಿದ್ದು 600 ಎಕರೆಯಷ್ಟು ಕೃಷಿ ಭೂಮಿ ಹೊಂದಿದೆ. ಗ್ರಾಮದ ಜನರಿಗೆ ಏನೇ ಬೇಕೆಂದರೂ 100 ಅಡಿ ಉದ್ದದ ಹಳ್ಳ ದಾಟಿಯೇ ಮೀಣ್ಯಂ ಗ್ರಾಮಕ್ಕೆ ಹೋಗಬೇಕಿದೆ.
ಕಳೆದ 5-6 ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ ಹಳ್ಳ ತುಂಬಿ ರಭಸದಿಂದ ಹರಿಯುತ್ತಿದ್ದು ಮರಗಿಡಗಳನ್ನು ಹೊತ್ತು ತರುತ್ತಿದೆ. ಪೋಷಕರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಶಾಲೆಗಳಿಗೆ ತಲುಪಿಸಬೇಕು. ಗ್ರಾಮಕ್ಕೆ ಸೇತುವೆ ನಿರ್ಮಿಸಿ ಇಲ್ಲವೇ ತಾತ್ಕಾಲಿಕ ಪರಿಹಾರ ಒದಗಿಸಬಹುದಾದ ಕ್ರಮಗಳನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನದಿಗೆ ಉರುಳಿದ ಕಾರು: 6 ತಿಂಗಳ ಮಗು ಸೇರಿ ಕುಟುಂಬದ ನಾಲ್ವರು ಪವಾಡದಂತೆ ಪಾರು!