ಚಾಮರಾಜನಗರ: ಮೊದಲ ಹಂತದಲ್ಲಿ ನಡೆಯುವ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಗ್ರಾಪಂ ಚುನಾವಣೆಯಲ್ಲಿ 1,241 ಸ್ಥಾನಗಳಿಗೆ 3,079 ಮಂದಿ ಕಣದಲ್ಲಿದ್ದಾರೆ. ಇವರಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ 43 ಗ್ರಾಮ ಪಂಚಾಯತ್ಗಳ 742 ಸ್ಥಾನ, ಗುಂಡ್ಲುಪೇಟೆ ತಾಲೂಕಿನ 34 ಗ್ರಾಮ ಪಂಚಾಯತ್ಗಳ 499 ಸ್ಥಾನ ಸೇರಿ ಒಟ್ಟು 77 ಗ್ರಾಮ ಪಂಚಾಯತ್ಗಳ 1,241 ಸ್ಥಾನಗಳಿಗೆ 3,705 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 62 ನಾಮಪತ್ರ ತಿರಸ್ಕೃತಗೊಂಡರೆ 411 ಮಂದಿ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದಿದ್ದಾರೆ. 62 ಮಂದಿ ಅವಿರೋಧ ಆಯ್ಕೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
750 ಮಂದಿ ವಿರುದ್ಧ ಕೇಸ್:
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮನ್ನು ಸೇರಿದಂತೆ 5 ಮಂದಿ ಮಾತ್ರ ಮನೆ ಮನೆಗಳಿಗೆ ತೆರಳಿ ಪ್ರಚಾರ ಕೈಗೊಳ್ಳಲು ಅವಕಾಶವಿದೆ. ಜೊತೆಗೆ, ಮಾಸ್ಕ್ ಧರಿಸಿ ಪ್ರಚಾರ ಮಾಡಬೇಕಾದ ನಿಯಮವಿದ್ದು, ಇದನ್ನು ಉಲ್ಲಂಘಿಸಿದ 750 ಮಂದಿಯ ಮೇಲೆ ಕೇಸ್ ದಾಖಲಾಗಿದೆ. 56 ಅಬಕಾರಿ ಇಲಾಖೆಗೆ ಸಂಬಂಧಿಸಿದ ಕೇಸ್ ಕೂಡ ಜಿಲ್ಲೆಯಲ್ಲಿ ದಾಖಲಾಗಿದೆ.