ಚಾಮರಾಜನಗರ: ಪ್ರತಿಷ್ಠೆ, ಹಣಬಲ, ಜಾತಿ ಲೆಕ್ಕಾಚಾರದ ನಡುವೆಯೂ ಗ್ರಾಪಂ ಚುನಾವಣೆಯಲ್ಲಿ ಗೆದ್ದು ಬೀಗಿದ ವ್ಯಕ್ತಿ ತನ್ನ ವಂಶಪಾರಂಪರ್ಯ ಕ್ಷೌರಿಕ ವೃತ್ತಿಯನ್ನು ಮುಂದುವರೆಸಿ ಮತ್ತೆ ಗ್ರಾಮಸ್ಥರ ಮನ ಗೆದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.
ಹರವೆ ಗ್ರಾಪಂನ ಒಂದನೇ ವಾರ್ಡ್ ಸದಸ್ಯ ಮಹೇಶ್ (ಮೊಯಿಲಿ) ತಮ್ಮ ವೃತ್ತಿಯನ್ನು ಮುಂದುವರೆಸಿದ ವ್ಯಕ್ತಿ. ಸುಮಾರು 20 ವರ್ಷಗಳಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಹೇಶ್, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದು, ವಿಶೇಷ ಎಂದರೆ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿ ಗೆಲುವು ಸಾಧಿಸಿದ ಕೀರ್ತಿ ಇವರಿಗೆ ಲಭಿಸಿದೆ.
ಮಹೇಶ್ 2ನೇ ತರಗತಿ ತನಕ ಓದಿದ್ದು, ಗ್ರಾಮದ ಜನರ ಜೊತೆ ನಿಕಟ ಸಂಪರ್ಕ, ಸೌಜನ್ಯ, ಅನ್ಯೋನ್ಯತೆ ಹೊಂದಿದ ಕಾರಣ ಗ್ರಾಮದ ಮತದಾರರು ಇವರಿಗೆ ಬೆಂಬಲ ನೀಡಿದ್ದಾರೆ.
ಓದಿ: 'ಹಕ್ಕಿ ಫೀವರ್' ನಾನ್ವೆಜ್ ಪ್ರಿಯರಲ್ಲಿ ಕಡಿಮೆ ಆಗಿಲ್ಲ ಫೀಯರ್... ವೈದ್ಯರು ಹೇಳುವುದಿಷ್ಟು!
ಮಹೇಶ್(ಮೊಯಿಲಿ) ತಂದೆ ಮುದ್ದ ಈಗಲೂ ಕೂಡ ಗ್ರಾಮದ ಮನೆ ಮನೆಗಳಿಗೆ ತೆರಳಿ ವೃದ್ಧರು, ಚಿಕ್ಕ ಮಕ್ಕಳಿಗೆ ಕ್ಷೌರ ಮಾಡುತ್ತಾರೆ. ಇವರ ಈ ಸೌಜನ್ಯ ನಡವಳಿಕೆಯಿಂದ ಮತದಾರರು ಈ ಬಾರಿ ಮಹೇಶ್‍ಗೆ ಮತ ನೀಡಿದ್ದಾರೆ ಎಂಬುದು ಸ್ಥಳೀಯರ ಅಭಿಮತ.