ಚಾಮರಾಜನಗರ : ಮತ ಚಲಾವಣೆ ವೇಳೆ ಸಹಾಯ ಕೋರಿದ ಸರಿಯಾಗಿ ಕಣ್ಣು ಕಾಣದ ಗ್ರಾಪಂ ಸದಸ್ಯರೊಬ್ಬರಿಗೆ ಸಹಾಯ ಮಾಡಬೇಕಾದ ಚುನಾವಣಾಧಿಕಾರಿಯೊಬ್ಬರು ವಿರುದ್ಧ ಮತ ಹಾಕಿಸಿದ ಆರೋಪಕ್ಕೆ ಗುರಿಯಾಗಿರುವ ಘಟನೆ ಹೂಗ್ಯಂ ಗ್ರಾಪಂನಲ್ಲಿ ಜರುಗಿದೆ.
ಈ ಸಂಬಂಧ 11 ಮಂದಿ ಸದಸ್ಯರು ಚುನಾವಣಾಧಿಕಾರಿ ಸಿದ್ದಪ್ಪಾಜಿಗೌಡ ಅವರಿಂದ ನಮಗೆ ಅನ್ಯಾಯವಾಗಿದೆ ಎಂದು ಇಂದು ಸಂಜೆ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟಿಸಿ ಮರು ಚುನಾವಣೆಗೆ ಆಗ್ರಹಿಸಿದ್ದಾರೆ.
ಹೂಗ್ಯಂ ಗ್ರಾಪಂನಲ್ಲಿ 20 ಸ್ಥಾನಗಳಿದ್ದು ಇವುಗಳಲ್ಲಿ 10 ಬಿಜೆಪಿ, 1 ಪಕ್ಷೇತರ, 1 ಜೆಡಿಎಸ್ ಹಾಗೂ 8 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆರಿಸಿ ಬಂದಿದ್ದಾರೆ. ಈ ಪೈಕಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಪಕ್ಷೇತರವಾಗಿ ಆರಿಸಿ ಬಂದಿದ್ದ ಈಶ್ವರಿ ಎಂಬುವರು ಬೆಂಬಲ ನೀಡಿದ್ದರು.
ಚುನಾವಣೆ ವೇಳೆ ಈಶ್ವರಿ ಅವರು ತನಗೆ ವಯಸ್ಸಾಗಿದ್ದು ಕಣ್ಣು ಕಾಣಲ್ಲ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ್ದ ಸುಬ್ಬಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಣಿಮೇಘಲಾ ಎಂಬುವರ ಪರ ಮತ ಚಲಾಯಿಸಲು ನೆರವಾಗಿ ಎಂದು ಕೋರುತ್ತಿದ್ದಂತೆ ಚುನಾವಣಾಧಿಕಾರಿ ಸಿದ್ದಪ್ಪಾಜಿ ಗೌಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಈಶ್ವರಿ ಮತ ವಾಲಿದ್ದರಿಂದ 10 ಮತಗಳು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಾಗೂ 10 ಮತಗಳು ಬಿಜೆಪಿ ಬೆಂಬಲಿತರಿಗೆ ಬಂದು ಲಾಟರಿ ಮೂಲಕ ಕಾಂಗ್ರೆಸ್ ಬೆಂಬಲಿತೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಮಣಿ ಮೇಘಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಬಿಜೆಪಿ ಬೆಂಬಲಿತರು ಚುನಾವಣಾಧಿಕಾರಿ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮರು ಚುನಾವಣೆಗೆ ಆಗ್ರಹಿಸಿದ್ದಾರೆ.