ಚಾಮರಾಜನಗರ : ಲಾಕ್ಡೌನ್ ಒತ್ತಡದ ನಡುವೆಯೂ ಸಿಗುವ ಅಲ್ಪ ಸಮಯದಲ್ಲೇ ಕವನಗಳನ್ನು ರಚಿಸುವ ಉತ್ತಮ ಹವ್ಯಾಸಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಲಕ್ಷ್ಮಮ್ಮ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸರವಣ ಹಾಗೂ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗ ಶ್ರೀಧರ್ ಎಂಬುವವರು ಮುಂದಾಗಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಡಿಡಿ ಲಕ್ಷ್ಮಮ್ಮ, ಕೋವಿಡ್-19 ವಿರುದ್ಧ ಹೋರಾಡುತ್ತಿದ್ದ ಕೊರೊನಾ ಯೋಧರನ್ನು ಕಂಡು ಸ್ಫೂರ್ತಿಗೊಂಡು, 8-10 ಕವಿತೆಗಳನ್ನು ರಚಿಸಿ ಗಡಿಜಿಲ್ಲೆ ಚಾಮರಾಜನಗರದ ಹಿರಿಮೆ - ಗರಿಮೆಗಳನ್ನು ಸಾರಿದ್ದಾರೆ. ಕೊರೊನಾ ಮುಕ್ತ ಚಾಮರಾಜನಗರ, ನನ್ನ ಊರು ನನ್ನ ಹೆಮ್ಮೆ, ಹಸಿರು ಜಿಲ್ಲೆ ಎವರ್ ಗ್ರೀನ್ ಚಾಮರಾಜನಗರ ಹೀಗೆ ತಮ್ಮ ಬಿಡುವಿನ ವೇಳೆಯಲ್ಲಿ ಕವನಗಳನ್ನು ರಚಿಸಿ ಸಂಕಷ್ಟದ ವೇಳೆಯಲ್ಲೂ ಉತ್ತಮ ಹವ್ಯಾಸ ರೂಢಿಸಿಕೊಳ್ಳಲು ಸಾಧ್ಯವಾಗಿದ್ದು ಇದನ್ನು ಹೀಗೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ನಮ್ಮ ಚಾಮರಾಜನಗರ ಮಾದಪ್ಪನ ಬೀಡು - ಚಿನ್ನದ ನಾಡು ಗಂಧದ ಗೂಡು - ಪ್ರಕೃತಿಯ ಹೊನ್ನಸಿರಿಯ ತವರೂರು, ಇದುವೆ ನನ್ನ ಊರು ಎಂದು ಬರೆದು ತಮಿಳುನಾಡು - ಕೇರಳ ಎಂಬ ದೇವರನಾಡಲ್ಲೂ ಕೊರೊನಾ ಅಟ್ಟಹಾಸವಿದ್ದರೂ, ಜಿಲ್ಲೆಗೆ ಬರದಂತೆ ತಡೆದರು. ನನ್ನೂರಿನ ಕೊರೊನಾ ಯೋಧರು ಎಂದು ಜಿಲ್ಲಾಡಳಿತ ಮತ್ತು ಜನರಿಗೆ ಅಭಿನಂದಿಸುತ್ತಾರೆ. ಇದೇ ರೀತಿ ಚಾಮರಾಜನಗರ ಹೆಮ್ಮೆ ಸಾರುವ 8-10 ಕವಿತೆಗಳನ್ನು ಬರೆದು ಕವಿ ಮನ ಬೆಳೆಸಲು ಮುಂದಡಿಯಿಟ್ಟಿದ್ದಾರೆ.
ನಿರ್ಗತಿಕರನ್ನು ಕಂಡು ಕವಿಯಾದ ಅಧಿಕಾರಿ : ನಗರಸಭೆಯ ಆರೋಗ್ಯ ನಿರೀಕ್ಷಕ ಸರವಣ ಲಾಕ್ಡೌನ್ ಅವಧಿಯಲ್ಲಿ ಬರೋಬ್ಬರಿ 80 ಕ್ಕೂ ಹೆಚ್ಚು ಕವನ, ಚುಟುಕುಗಳನ್ನು ಬರೆದಿದ್ದು, ಇವರು ಕವನ ಬರೆಯುವಂತೆ ಮಾಡಿದ್ದು, ಸಿಡಿಎಸ್ ಭವನದಲ್ಲಿದ್ದ ವಲಸೆ ಕಾರ್ಮಿಕರು ಎಂಬುದು ಇನ್ನೊಂದು ವಿಶೇಷ.
ಪ್ರತಿದಿನ ಸಿಡಿಎಸ್ ಭವನಕ್ಕೆ ತೆರಳಿ ಅಲ್ಲಿನವರ ಬೇಕು- ಬೇಡ ವಿಚಾರಿಸುತ್ತಿದ್ದ ಸರವಣ ಅವರಿಗೆ ಅವರ ಕಷ್ಟದ ಬದುಕು ಕಂಡು ಕವನ ಬರೆಯಬೇಕೆನಿಸಿ ಒಂದು ಕವಿತೆ ಬರೆದಿದ್ದು, ಈಗ 80 ದಾಟಿದೆ. ಕೊರೊನಾ, ದೇವರು, ಆರೋಗ್ಯದ ಕುರಿತು ಕವನಗಳನ್ನು ರಚಿಸಿರುವ ಸರವಣ ನನ್ನ ಮನಸ್ಸಿನಲ್ಲಿ ಏನೇ ವಿಶೇಷವಾಗಿದ್ದು, ಕಂಡರು ಪದಗಳಲ್ಲಿ ಬಂಧಿಯಾಗಿಸಬೇಕೆನಿಸುತ್ತಿದ್ದು. ಲಾಕ್ಡೌನ್ನಲ್ಲಿ ಒಲಿದ ಈ ಹವ್ಯಾಸವನ್ನು ಮುಂದುವರೆಸಲಿದ್ದು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ತಮ್ಮಡಹಳ್ಳಿಯ ಗ್ರಾಮ ಲೆಕ್ಕಿಗ ಶ್ರೀಧರ್ ಈಗಾಗಲೇ ಎರಡು ಕವನ ಸಂಕಲನವನ್ನು ಹೊರತಂದಿದ್ದಾರೆ. ಕಾರ್ಮಿಕರು, ತಾಯಿ ಕುರಿತ ಕವನಗಳನ್ನು ಬರೆದಿದ್ದಾರೆ. ಜೊತೆಗೆ, ಚಿತ್ತದೊಳಗೇಕೊ ಮತ್ತದೇ ನೆನಪು ಎಂಬ ಕವನ ಸಂಕಲವನ್ನು ಪೂರ್ಣಗೊಳಿಸಿ ಕರಡನ್ನೂ ತಿದ್ದಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲೂ ಪಾಲ್ಗೊಂಡು ಹಲವು ಕವಿತೆಗಳನ್ನು ವಿಮರ್ಶೆಯನ್ನೂ ಸಹ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಸರ್ಕಾರಿ ನೌಕರರು ಲಾಕ್ಡೌನ್ ವೇಳೆ ಕವಿಗಳಾಗುವ ಮೂಲಕ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಉತ್ತಮ ಜೀವನಶೈಲಿಯೊಂದಕ್ಕೆ ತೆರೆದುಕೊಂಡಿದ್ದಾರೆ.