ಚಾಮರಾಜನಗರ: ಕಳೆದ ಮೂರು ದಿನಗಳ ಹಿಂದೆ ಕರಿಕಲ್ಲು ಕ್ವಾರಿ ಮೇಲೆ ಕೂರುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಕಡುವಿನಕಟ್ಟೆ ಹುಂಡಿ (ಕೆ.ಕೆ.ಹುಂಡಿ) ಗ್ರಾಮದ ಹೊರವಲಯದಲ್ಲಿ ಸ್ಥಗಿತಗೊಂಡಿದ್ದ ಕ್ವಾರಿ ಗುಡ್ಡದ ಮೇಲೆ ಆಗಾಗ ಚಿರತೆ ಬಂದು ಕೂತು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಆಗಾಗ ಕುರಿ, ಮೇಕೆಗಳನ್ನು ತಿಂದು ಹಾಕಿತ್ತು. ಇದರ ಉಪಟಳ ಹೆಚ್ಚಾಗಿದ್ದರಿಂದ ಚಿರತೆ ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಬೋನಿಟ್ಟು ನಾಯಿ ಕಟ್ಟಿ ಹಾಕಿ ಕಾಯುತ್ತಿತ್ತು. ಇಂದು ಎರಡೂವರೆ ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ಪುಣಜನೂರು ವಲಯದ ನೀರದುರ್ಗಿ ಎಂಬ ಸ್ಥಳಕ್ಕೆ ಬಿಡಲಾಗಿದೆ ಎಂದು ಚಾಮರಾಜನಗರ ಆರ್ಎಫ್ಒ ಅಭಿಲಾಶ್ ತಿಳಿಸಿದ್ದಾರೆ.