ಚಾಮರಾಜನಗರ: ಕಳೆದ ಬಾರಿ ಸಂಭವಿಸಿದ ಪ್ರವಾಹದಲ್ಲಿ ತತ್ತರಿಸಿ ಪರಿಹಾರ ಎದುರು ನೋಡುತ್ತಿದ್ದ ಕೊಳ್ಳೇಗಾಲ ತಾಲೂಕಿನ 5-6 ಗ್ರಾಮಗಳು ಮತ್ತೆ ಪ್ರವಾಹಕ್ಕೆ ಸಿಲುಕಿ ಒದ್ದಾಡುತ್ತಿವೆ. ಇನ್ನು ಪ್ರವಾಹಕ್ಕೀಡಾಗಿ 4-5 ದಿನಗಳಾದರೂ ಎಂಪಿ ಜಿಲ್ಲೆಯತ್ತ ಸುಳಿಯದಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ.
ಕೊಳ್ಳೇಗಾಲದ ದಾಸನಪುರ, ಹಳೇ ಅಣಗಳ್ಳಿ, ಹರಳೆ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, ಹಳೇ ಹಂಪಾಪುರದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ 800ಕ್ಕೂ ಹೆಚ್ಚು ಮಂದಿಯನ್ನು 4 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಪರಿಹಾರಕ್ಕೂ ಮೊದಲೇ ಮತ್ತೊಂದು ಪ್ರವಾಹ:
ದಾಸನಪುರ, ಹಳೇ ಅಣಗಳ್ಳಿ ಮತ್ತು ಹರಳೆ ಗ್ರಾಮದಲ್ಲಿ ಕಳೆದ ವರ್ಷ ನೆರೆ ಉಂಟಾಗಿದ್ದ ವೇಳೆ ಆಗಿದ್ದ ಬೆಳೆಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗುವ ಮೊದಲೇ ಈ ಬಾರಿಯ ಕಬ್ಬು, ಜೋಳ ಕಾವೇರಿ ಪಾಲಾಗಿದೆ ಎಂದು ಆಕ್ರೋಶ ಹೊರಹಾಕುತ್ತಾರೆ ಈ ಗ್ರಾಮಗಳ ಜನರು.
ಕಳೆದ ಬಾರಿ ಕಬ್ಬು ನೀರುಪಾಲಾಯಿತು. ಈಗ ಭತ್ತ, ಈರುಳ್ಳಿಯೂ ಪ್ರವಾಹದ ಪಾಲಾಗಿದೆ. ಕಳೆದ ಬಾರಿ ಪ್ರವಾಹದ ಒಂದು ರೂ. ಕೂಡಾ ನಮಗೆ ಬಂದಿಲ್ಲ. ಈಗ ಕೈಗೆ ಬಂದ ಬೆಳೆಯೂ ಕೂಡ ನಮಗೆ ಸಿಗಲಿಲ್ಲ ಎಂದು ದಾಸನಪುರ ಗ್ರಾಮಸ್ಥೆ ನಿಂಗರಾಜಮ್ಮ ಅಳಲು ತೋಡಿಕೊಂಡರು.
ಬಾರದ ಸಂಸದ ವಿ.ಶ್ರೀ:
ಇನ್ನು ನೆರೆ ಸಂತ್ರಸ್ತರ ಕಷ್ಟವನ್ನು ಆಲಿಸಲು ಸಂಸದ ವಿ.ಶ್ರೀನಿವಾಸಪ್ರಸಾದ್ ಬರಲಿಲ್ಲ. ಪ್ರವಾಹ ಉಂಟಾದ ಬಳಿಕ ಬರುತ್ತಿರುವ ಎನ್.ಮಹೇಶ್, ಗ್ರಾಮಗಳಿಗೆ ನೀರು ಬರದಂತೆ ಒಂದು ಶಾಶ್ವತ ಪರಿಹಾರ ನೀಡಲಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.
ಕೇವಲ ಮತ ಕೇಳಲು ಬರದೇ ಗ್ರಾಮದ ಅಭಿವೃದ್ಧಿಯತ್ತಲೂ ಗಮನಹರಿಸಿ, ಪ್ರವಾಹಪೀಡಿತ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಬಸ್ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.