ಚಾಮರಾಜನಗರ: 4 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಜ್ವರದ ಕಾರಣಕ್ಕೆ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದ್ದು ಸದ್ಯ ಪಾಲಕರಲ್ಲಿ ಆತಂಕ ಮೂಡಿಸಿದೆ.
ರಾಮಸಮುದ್ರ ಬಡಾವಣೆಯಲ್ಲಿರುವ ಸಂತ ಪ್ರಾನ್ಸಿಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿ ತುಟಿ ಬಿಚ್ಚುತ್ತಿಲ್ಲ, ಆರೋಗ್ಯ ಇಲಾಖೆ ತನಗೆ ಮಾಹಿತಿ ಇಲ್ಲ ಎಂದು ಜಾರಿಕೊಳ್ಳುತ್ತಿದೆ. ಸದ್ಯ, ಶಾಲೆಗೆ ರಜೆ ಘೋಷಣೆ ಮಾಡಲಾಗಿದ್ದು, ತೀವ್ರ ಜ್ವರದಿಂದ ಬಾಲಕಿ ಬಳಲುತ್ತಿದ್ದಳು ಎನ್ನಲಾಗಿದೆ.
ಈ ಸಂಬಂಧ, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ಮಾತನಾಡಿ, ವೈದ್ಯರನ್ನು ಕಳುಹಿಸಲಾಗಿದೆ, ಇನ್ನು ಮಾಹಿತಿ ಸಿಕ್ಕಿಲ್ಲ ಎಂದರು. ಡಿಎಚ್ಇ ಡಾ.ವಿಶ್ವೇಶ್ವರಯ್ಯ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದ್ದೇವೆ ಎಂದಿದ್ದಾರೆ, ಶಾಲಾ ಆಡಳಿತ ಮಂಡಲಳಿ ಯಾರೊಬ್ಬರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.
ಮೂರನೇ ಕ್ಲಾಸ್ ವಿದ್ಯಾರ್ಥಿನಿಗೆ ಕೊರೊನಾ: ನಿತ್ಯ ಒಂದಿಲ್ಲೊಂದು ಶಾಲೆಯಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿಗೆ ಕೊರೊನಾ ಕಾಣಿಸಿಕೊಂಡಿದೆ. ಸದ್ಯ, ಶಾಲೆಗೆ ರಜೆ ಘೋಷಿಸಿ ತರಗತಿಯ 29 ಮಂದಿಯ ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.