ಕೊಳ್ಳೇಗಾಲ/ಚಾಮರಾಜನಗರ: ಉಳುಮೆ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದು ಅರಣ್ಯ ರಕ್ಷಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರುಗಳು ದಾಖಲಾಗಿವೆ.
ಸ್ವಾಮಿ, ಮಂಜೇಶ್, ಚಿನ್ನಸ್ವಾಮಿ, ಸರೋಜಮ್ಮ, ರಮ್ಯ ಹಾಗೂ ಮಂಜೇಶ್ ಎಂಬಾತನ ಪತ್ನಿ ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಅ.8 ರಂದು ಬೆಳಗ್ಗೆ 11.30ಕ್ಕೆ ತಾಲೂಕಿನ ಜಾಗೇರಿ ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿದ ಬೂದುಗಟ್ಟೆದೊಡ್ಡಿಯ ಸಮೀಪದ ಕೆಂಬಾರೆ ಅರಣ್ಯ ಪ್ರದೇಶವನ್ನು ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಎಂಬಾತನ ಕುಟುಂಬ ಉಳುಮೆ ಮಾಡುತ್ತಿದ್ದರು.
ಈ ವೇಳೆಯಲ್ಲಿ ಗಸ್ತು ನಡೆಸುತ್ತಿದ್ದ ಅರಣ್ಯ ರಕ್ಷಕ ಕೃಷ್ಣಪ್ಪ ಅರಣ್ಯ ಭೂಮಿಯಲ್ಲೇಕೆ ವ್ಯವಸಾಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಸ್ವಾಮಿ ಕುಟುಂಬಸ್ಥರು ಏಕಾಏಕಿ ಕೃಷ್ಣಪ್ಪರನ್ನು ಏಕವಚನದಲ್ಲಿ ನಿಂದಿಸಿದಲ್ಲದೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗಾಯಾಳು ಕೃಷ್ಣಪ್ಪ ಗ್ರಾಮಾಂತರ ಠಾಣೆಯಲ್ಲಿ ಸ್ವಾಮಿ ಮತ್ತು ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ಕೃಷ್ಣಪ್ಪ ವಿರುದ್ಧ ಪ್ರತಿ ದೂರು:
ಸ್ವಾಮಿ ಪತ್ನಿ ಸರೋಜಮ್ಮ ಈ ಬಗ್ಗೆ ಪ್ರತಿದೂರು ನೀಡಿದ್ದು, ನಮ್ಮ ಜಮೀನಿನಲ್ಲಿ ನಾನು ಮತ್ತು ನನ್ನ ಸೊಸೆ ಕೆಲಸ ಮಾಡುತ್ತಿದ್ದ ವೇಳೆ ಫಾರೆಸ್ಟ್ ಗಾರ್ಡ್ ಕೃಷ್ಣಪ್ಪ ಏಕಾಏಕಿ ಬಂದು ಇಲ್ಲಿಂದ ಹೋಗಿ ಎಂದು ಗಲಾಟೆ ಮಾಡಿದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ. ವಿನಾಕಾರಣ ಗಲಾಟೆ ಮಾಡಿರುವ ಕೃಷ್ಣಪ್ಪ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.
ಹೀಗೆ ಉಳುಮೆ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನೌಕರ ಹಾಗೂ ಕುಟುಂಬವೊಂದರ ನಡುವೆ ನಡೆದ ವಾಗ್ವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ದೂರು ಪ್ರತಿ ದೂರುಗಳು ದಾಖಲಾಗಿವೆ. ಈ ಹಿನ್ನೆಲೆ ಪಿಎಸ್ಐ ವಿ ಸಿ ಅಶೋಕ್ ತನಿಖೆ ಕೈಗೊಂಡಿದ್ದಾರೆ.