ಚಾಮರಾಜನಗರ: ತರೇಹವಾರಿ ಆಫರ್ಗಳು, ಹೊಸ ಎಟಿಎಂ ಕಾರ್ಡ್ ನೀಡುವುದು, ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ವಂಚಿಸುತ್ತಿದ್ದ ಸೈಬರ್ ಕಳ್ಳರು ಈಗ ಹಣ ಪೀಕಲು ಫೇಸ್ ಬುಕ್ ಮೊರೆ ಹೋಗಿದ್ದಾರೆ. ಅದು ಕೂಡ, ಪೊಲೀಸರ ಹೆಸರಲ್ಲಿ...!
ಚಾಮರಾಜನಗರ ಹಿಂದಿನ ಎಸ್ಪಿಯಾಗಿದ್ದ ಎಚ್.ಡಿ.ಆನಂದ್ ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಲವರಿಗೆ ತುರ್ತಿನ ಕಾರಣದಿಂದ ಹಣ ಕೊಡಬೇಕೆಂದು ಮೆಸೇಜ್ ಕಳುಹಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿರುವುದು ಪೊಲೀಸರನ್ನೇ ದಂಗು ಬಡಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಬೇರೆ ಜಿಲ್ಲೆಗಳ ಪಿಎಸ್ಐ ಹೆಸರುಗಳಲ್ಲಿ ನಕಲಿ ಖಾತೆ ತೆರೆದು ಮೆಸೆಂಜರ್ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ, ಎಚ್ಚೆತ್ತ ಪೊಲೀಸರು ಸ್ಪಷ್ಟನೆ ನೀಡಿದ್ದರು. ಈಗ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಹೆಸರಲ್ಲೇ ನಕಲಿ ಖಾತೆ ತೆರೆದು ಹಣ ಪೀಕಲು ಯತ್ನಿಸಿರುವುದು ಕಳವಳಕಾರಿಯಾಗಿದೆ.
ಫೋನ್ ಕರೆಗಳ ಮೇಲಷ್ಟೇ ನಿಗಾ ಇಡುತ್ತಿದ್ದ ಜನರು ಈಗ ಪೊಲೀಸರ ಮುಖವಾಡ ಧರಿಸಿ ಫೇಸ್ ಬುಕ್ ನಲ್ಲಿ ಪ್ರತ್ಯಕ್ಷವಅಗುತ್ತಿರುವ ಖದೀಮರ ಮೇಲೂ ಎಚ್ಚರ ವಹಿಸುವುದು ಅಗತ್ಯವಾಗಿದೆ.