ಚಾಮರಾಜನಗರ: ಕಾಡುಹಂದಿ ಬೇಟೆಗೆ ಹೋಗದಿದ್ದಕ್ಕೆ 15ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಚಿತ್ರ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆಯಲ್ಲಿ ನಡೆದಿದೆ.
ಕೋಟೆಕೆರೆ ಗ್ರಾಮದ ಒಂದು ಕೋಮಿನಲ್ಲಿ ಆಗಾಗ ಕಾಡುಪ್ರಾಣಿಗಳ ಶಿಕಾರಿಗೆ ತೆರಳಿ ಕಾಡುಹಂದಿ ಮಾಂಸವನ್ನು ಸಮನಾಗಿ ಹಂಚಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಬೇಟೆಗೆ ಹೋಗದವರು ದಂಡ ಕಟ್ಟಬೇಕಿದ್ದು, ದಂಡ ಕಟ್ಟದ 15 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.
![Excommunication for not going wild hunting in Chamarajnagar](https://etvbharatimages.akamaized.net/etvbharat/prod-images/4531360_handi.jpg)
ಬಹಿಷ್ಕಾರಕ್ಕೆ ಒಳಗಾದವರೊಂದಿಗೆ ಯಾರೂ ಮಾತನಾಡಬಾರದು, ಶುಭ-ಅಶುಭ ಕಾರ್ಯಗಳಿಗೆ ಅವರನ್ನು ಸೇರಿಸಬಾರದು ಎಂದು ಗ್ರಾಮದ ಜನರು ಆದೇಶಿಸಿದ್ದಾರೆಂದು ಈಟಿವಿ ಭಾರತಕ್ಕೆ ಸ್ವಾಮಿ ಎಂಬುವರು ದೂರವಾಣಿ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಸಾಮಾಜಿಕ ಬಹಿಷ್ಕಾರದ ಸಂಬಂಧ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಯಜಮಾನರನ್ನು ಕರೆಸಿ ಎಚ್ಚರಿಕೆ ನೀಡಿದ್ದರೂ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ. ಬೇಟೆಯಾಡುವುದೇ ಅಪರಾಧವಾಗಿದ್ದು, ಬೇಟೆಯಾಡದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.