ಚಾಮರಾಜನಗರ: ಬೆಳ್ಳಂಬೆಳಗ್ಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಂಚಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ದಾಂಧಲೆ ಎಬ್ಬಿಸುತ್ತಿರುವುದು ತಮಿಳುನಾಡಿನ ಮಧುಮಲೆ ಅರಣ್ಯ ಪ್ರದೇಶದ ಪುಂಡಾನೆ ಎಂದು ತಿಳಿದುಬಂದಿದೆ.
ಈ ಆನೆಯು ಈಗಾಗಲೇ 7 ಮಂದಿಯನ್ನು ಬಲಿ ಪಡೆದಿದೆ ಎನ್ನಲಾಗಿದ್ದು, ಆನೆಯ ಚಲನವಲನಗಳನ್ನು ಅರಿಯಲು ರೇಡಿಯೋ ಕಾಲರ್ ಅಳವಡಿಸಲಾಗಿದೆ ಎನ್ನಲಾಗಿದೆ. ಆದರೆ ಕಳೆದ 10 ದಿನಗಳಿಂದ ರೇಡಿಯೋ ಕಾಲರ್ನ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಈಟಿವಿ ಭಾರತಕ್ಕೆ ಬಂಡೀಪುರ ಸಿಎಫ್ಒ ಬಾಲಚಂದ್ರ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ತಮಿಳುನಾಡಿನ ಆನೆ ನಮ್ಮ ಭಾಗದಲ್ಲಿರುವುದರಿಂದ ನಾವೇ ಕಾರ್ಯಾಚರಣೆ ನಡೆಸಬೇಕಿದೆ. ಟ್ರಾಂಕ್ಲೈಸಿಂಗ್ ಗನ್ ಬಳಸಿ ಆನೆಯನ್ನು ಸೆರೆ ಹಿಡಿಯಲಿದ್ದು, ಮೃಗಾಲಯದ ವೈದ್ಯರು ಆಗಮಿಸುತ್ತಿದ್ದಾರೆ. ಕಾರ್ಯಾಚರಣೆಗೆ 4 ಆನೆಗಳನ್ನು ಬಳಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಇಬ್ಬರಿಗೆ ಗಾಯ: ಬೆಳಗ್ಗೆ ಶಿವಪುರ ಗ್ರಾಮದ ಸಿದ್ದಯ್ಯ ಎಂಬವರು ದನ ಮೇಯಿಸುತ್ತಿದ್ದಾಗ ಆನೆ ದಾಳಿ ನಡೆಸಿ ಗಾಯಗೊಳಿಸಿತ್ತು. ಬಳಿಕ, ಹಂಗಳಕೆರೆ ಬಳಿ ಬೀಡು ಬಿಟ್ಟಿದ್ದ ಆನೆಯನ್ನು ನೋಡಲು ಹೋಗಿದ್ದ ರವಿ ಎಂಬ ಯುವಕನ ಮೇಲೂ ದಾಳಿ ಮಾಡಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಇಬ್ಬರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, 3 ಹಸುಗಳ ಮೇಲೆ ದಾಳಿ ಮಾಡಿರುವ ಆನೆ, ಎರಡು ಹಸುಗಳನ್ನು ಬಲಿ ಪಡೆದಿದ್ದು, ಒಂದನ್ನು ಗಾಯಗೊಳಿಸಿದೆ.
ಆನೆ ಬಂದಿದೆ ಎಂಬ ಮಾಹಿತಿ ಅರಿತು ದೂರದೂರುಗಳಿಂದ ಜನರು ಬರುತ್ತಿರುವುದರಿಂದ ಆನೆ ಮತ್ತಷ್ಟು ಗಲಿಬಿಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸವಾಗಿದೆ.