ಚಾಮರಾಜನಗರ: ದೀಪಾವಳಿ ವೇಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಿ, ಜಾತ್ರೆ, ರಥೋತ್ಸವ, ತೆಪ್ಪೋತ್ಸವ ನಡೆಸದಿರಲು ತೀರ್ಮಾನಿಸಲಾಗಿದೆ.
ದೀಪಾವಳಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ.ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ಹಾಗೂ ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮಿ, ಶಾಸಕರಾದ ಆರ್. ನರೇಂದ್ರ, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದ ನಿರ್ದೇಶನ ಅನುಸಾರ ಜಾತ್ರೆ, ಮೆರವಣಿಗೆ ಇತ್ಯಾದಿ ನಡೆಸಲು ನಿರ್ಬಂಧ ಇದೆ. ಆದರೆ ದರ್ಶನಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಹಬ್ಬದ ಸಂದರ್ಭದಲ್ಲಿ ಹಾಲರವಿ ಉತ್ಸವವನ್ನು ಸಾಂಪ್ರದಾಯಿಕವಾಗಿ ಸೀಮಿತ ಸಂಖ್ಯೆಗೆ ನಿಗದಿಪಡಿಸಿ ನೆರವೇರಿಸಬಹುದೆಂಬ ತೀರ್ಮಾನ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ಶಿವಮೊಗ್ಗ ಜಿ.ಪಂ.ಆವರಣದಲ್ಲಿ ಮಣ್ಣಿನ ದೀಪ ಮಾರಾಟ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ
ಹಬ್ಬದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವವರಿಗೆ ಸಮರ್ಪಕವಾಗಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ಬಸ್ಸುಗಳ ನಿಯೋಜನೆ, ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕಿತ್ಸೆ ನೀಡಲು ತಾತ್ಕಾಲಿಕ ಕ್ಯಾಂಪ್‍ಗಳನ್ನು ತೆರೆಯಬೇಕೆಂದು ಡಿಸಿ ಮತ್ತು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.