ಚಾಮರಾಜನಗರ : ಲಾರಿ ಚಾಲಕನಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ 10 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಿಳುನಾಡಿನ ಸೇಲಂಗೆ ಈರುಳ್ಳಿ ಮಾರಲು ಕಳೆದ ಏಳು ದಿನಗಳಲ್ಲಿ ಮೂರು ಬಾರಿ ತೆರಳಿದ್ದ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಆರಂಭದಲ್ಲಿ ಪತ್ನಿ, ಮಕ್ಕಳು, ಸಹೋದರ ಮತ್ತು ಟೀ ಮಾರುವಾತ ಸೇರಿ 10 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರನ್ನಾಗಿ ಗುರುತಿಸಲಾಗಿದೆ. ಎಲ್ಲರನ್ನೂ ಸದ್ಯಕ್ಕೆ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಮಹದೇವಪ್ರಸಾದ್ ನಗರ ಬಡಾವಣೆಯ ಬೀದಿಯನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ. ಸೋಂಕಿತ ವಾಸ ಮಾಡುತ್ತಿದ್ದ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದೆ. 100 ಮೀ ವ್ಯಾಪ್ತಿಯನ್ನು ಬಫರ್ ಝೋನ್ ಮಾಡಲಾಗಿದೆ. ಕಂಟೇನ್ಮೆಂಟ್ ವಲಯಕ್ಕೆ ಓರ್ವ ಅಧಿಕಾರಿಯನ್ನು ನೇಮಿಸಿದ್ದು ಅಲ್ಲಿನ ನಿವಾಸಿಗಳ ಬೇಕು ಬೇಡ ಗಮನಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗೆ ಸೋಂಕು ತಗುಲಿದ್ದ ವೇಳೆ ಆತನ ಸೋದರ ಮಾವ ತಪ್ಪು ಮಾಹಿತಿ ನೀಡಿದ್ದರಿಂದ ಆತನ ವಿರುದ್ಧ ಪ್ರಾಕೃತಿಕ ವಿಕೋಪ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.