ಚಾಮರಾಜನಗರ : ಮೊದಲು ಮಾನ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ, ನಾವು ಸನ್ನದ್ಧರಾಗಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಮಲಿಂಗಾರೆಡ್ಡಿ, ಆರ್ ಲಕ್ಷ್ಮಣ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂಬ ಅವರ ಹೇಳಿಕೆ ನೋಡಿದ್ದೇನೆ. ಮಾನದ ಬಗ್ಗೆ ನಿಜವಾಗಲೂ ಯೋಚನೆ ಮಾಡುವವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನೆಹರೂ ಕುಟುಂಬದ ವಿರುದ್ಧ ಮಾತನಾಡುವ ಮುನ್ನ ಮಾನದ ಬಗ್ಗೆ ಯೋಚಿಸಬೇಕಿತ್ತು. ಅವರಾಡಿದ ಮಾತುಗಳು ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಯಲ್ಲಿ ಬರುವ ಮಾತುಗಳಾ? ಎಂದು ಹರಿಹಾಯ್ದರು.
ಮಾನ ಇದ್ದರೇ ಮಾನನಷ್ಟ ಮೊಕದ್ದಮೆ ಹಾಕಲಿ, ಮೊದಲು ದುರಂಹಕಾರದ ಪರಮಾವಧಿ ಬಿಟ್ಟು ನಡೆ-ನುಡಿಗಳು ಸರಿಯಿರಲಿ, ವಾಜಪೇಯಿ, ಅಡ್ವಾನಿ ಅವರ ಬಗ್ಗೆ ನಮಗೆ ಗೌರವವಿದೆ, ಅವರನ್ನು ನೋಡಿ ಕಲಿಯಿರಿ, ಮಾನನಷ್ಟ ಮೊಕದ್ದಮೆ ಹಾಕುವುದಕ್ಕೆ ನಮ್ಮ ಸ್ವಾಗತವಿದೆ ಎಂದರು.
ದೆಹಲಿ ರೈತ ಹೋರಾಟಗಾರರು ದಲ್ಲಾಳಿಗಳು ಎಂಬ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕೃಷಿ ಸಚಿವರಿಗೆ ರೈತರ ಸಮಸ್ಯೆ ಬಗ್ಗೆ ಅರಿವಿಲ್ಲ, ಯಾವ ಕಾರಣಕ್ಕಾಗಿ ರೈತರು ಪ್ರತಿಭಟಿಸುತ್ತಿದ್ದಾರೆಂಬುದನ್ನು ಅವರು ತಿಳಿದುಕೊಳ್ಳಬೇಕು, ಶ್ರೀಮಂತರ ಪರವಾದ ಕಾನೂನಿನ ವಿರುದ್ಧ ರೈತರು ಹೋರಾಟ ಮಾಡುತ್ತಿದ್ದಾರೆ.
ಬಿಜೆಪಿ ಅವರು ನಿಜವಾದ ಕಾರ್ಪೊರೇಟ್ ಕಂಪನಿಯ ಏಜೆಂಟ್ಗಳು, ಕೃಷಿ ಸಚಿವರ ಮಾತುಗಳು ವಿಪರ್ಯಾಸ ಮತ್ತು ಶೋಚನೀಯ ಎಂದು ಹೇಳಿದರು. ಬೆಳೆ ವಿಮೆ ಸರಿಯಾಗಿ ನಿರ್ಣಹಣೆ ಆಗುತ್ತಿಲ್ಲ, ಅದರ ಬಗ್ಗೆ ಮಾತನಾಡಬೇಕು, ರೈತರ ವಿರುದ್ಧ ಅಗೌರವದ ಮಾತುಗಳು ಆಡುವುದನ್ನು ನಿಲ್ಲಿಸಲಿ, ಒಳ್ಳೆಯ ಖಾತೆ ಸಿಕ್ಕಿದ್ದು ರೈತರ ಪರ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಮೋದಿ ಗ್ರಾಫ್ ಪಾತಾಳಕ್ಕೆ : ಕೊರೊನಾ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದರಿಂದ ಮೋದಿ ಗ್ರಾಫ್ ಪಾತಾಳಕ್ಕಿಳಿದಿದೆ. ಬಡ ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಲು ಮುಂದಾಗಿರುವುದೇ ದೇಶದ ಆರ್ಥಿಕ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂಬುದಕ್ಕೆ ಉದಾಹರಣೆ, ಮೋದಿ ಅವರ ಜನಪ್ರಿಯತೆಯ ಗ್ರಾಫ್ ಪಾತಾಳಕ್ಕಿಳಿದಿದೆ ಎಂದು ಕಿಡಿಕಾರಿದರು.