ಚಾಮರಾಜನಗರ: ಬಣ್ಣಬಣ್ಣದ ಮಾತುಗಳು ಜನ ಸಾಮಾನ್ಯರಿಗೆ, ಬಂಡವಾಳ ಮಾತ್ರ ಅಂಬಾನಿ-ಅದಾನಿಗೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತಸಂಘ ಆಯೋಜಿಸಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿ, ಕೋವಿಡ್ ಹಾವಳಿಯಿಂದ ಜರ್ಜರಿತವಾದ ಕಾಲಮಾನದಲ್ಲೇ ಕೇವಲ ನೂರು ಜನ ಶತಕೋಟ್ಯಾಧೀಶರು 12.5 ಲಕ್ಷ ಕೋಟಿ ಲಾಭ ಗಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಲಂಗು-ಲಗಾಮಿಲ್ಲದ ಕಾನೂನುಗಳು ಜಾರಿಗೆ ಬಂದರೆ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಾದ ಈರುಳ್ಳಿಯಂತೆ ಎಲ್ಲಾ ದವಸ-ಧಾನ್ಯಗಳಿಗಾಗುತ್ತದೆ ಎಂದು ಅವರು ಕೃಷಿ ಕಾಯ್ದೆಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಪ್ರೊ. ನಂಜುಂಡಸ್ವಾಮಿ ಬದುಕಿದ್ದರೆ ಈಗ ಅವರು ಕಾನೂನು ಬಾಹಿರ ತಡೆ ಕಾಯ್ದೆ ಮೂಲಕ ಜೈಲಲ್ಲಿರುತ್ತಿದ್ದರು. ಅಂಬೇಡ್ಕರ್, ಗಾಂಧಿ ಅವರ ಸ್ಥಿತಿಯೂ ಭಿನ್ನವಿರುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಟೀಕಿಸಿದರು.
ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ ಮುಂದೆಯೂ ಇರಲಿದೆ ಎಂದು ಮೋದಿ ಅವರು ಪ್ರವಾದಿ ರೀತಿ ಮಾತನಾಡುತ್ತಾರೆ. ಹಾಗಾದರೆ, ದೆಹಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು ಮೂಢಾತ್ಮರೇ? ಇದಕ್ಕೆ ಕಾರಣ ಮೋದಿ, ಶಾ ಅವರ ವಂಚಕಾತ್ಮ ಕಾರಣ ಎಂದು ಹರಿಹಾಯ್ದರು. ಎಪಿಎಂಸಿಗಳು ಖಾಸಗಿಯಾಗಿಯೂ ಇರಲಿದೆ, ಸರ್ಕಾರಿ ನಿಯಂತ್ರಣದಲ್ಲೂ ಇರಲಿದೆ ಎಂದು ಹೇಳುತ್ತಿದ್ದಾರೆ. ಖಾಸಗಿ ಶಾಲೆಗಳ ಮುಂದೆ ಸರ್ಕಾರಿ ಶಾಲೆಗಳ ಸ್ಥಿತಿ ಹೇಗಾಗಿದೆ ಎಂದು ಗೊತ್ತಿಲ್ಲವೇ ಎಂದು ದೇವನೂರು ಮಹಾದೇವ ಪ್ರಶ್ನಿಸಿದರು.