ಚಾಮರಾಜನಗರ: ಗಣಿಗಾರಿಕೆ ನಡೆಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ- ಮಾಲೀಕರಿಗೆ ಭರ್ಜರಿ ಲಾಭ ಬರುವುದು ಎಷ್ಟು ನಿಜವೋ ಅಷ್ಟೇ ಗಣಿಗಾರಿಕೆಯಿಂದ ಗ್ರಾಮಸ್ಥರು ತೊಂದರೆಗೀಡಾಗುವುದು ಸತ್ಯ. ಇದನ್ನೆಲ್ಲಾ ಅರಿತ ಚಾಮರಾಜನಗರ ಡಿಸಿ ಹೊಸದೊಂದು ಯೋಜನೆ ಸಾಕಾರಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಶತಮಾನ ಪೂರೈಸಿದ 35 ಶಾಲೆಗಳಿದ್ದು, ಇವುಗಳಲ್ಲಿ ಮೊದಲಿಗೆ ಗಣಿಬಾಧಿತ ಗ್ರಾಮಗಳ 6 ಶಾಲೆಗಳ ಅಭಿವೃದ್ಧಿಗೆ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಮುಂದಾಗಿದ್ದಾರೆ. ಮೊದಲಿಗೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲು ಯೋಜನೆ ರೂಪಿಸಿದ್ದಾರೆ.
ಈಗಾಗಲೇ ನಿರ್ಮಿತಿ ಕೇಂದ್ರ ಶಾಲೆಗೆ ಭೇಟಿಯಿತ್ತು ಯೋಜನೆ ರೂಪಿಸಿಕೊಂಡಿದ್ದು ಇನ್ನೊಂದು ತಿಂಗಳಿನಲ್ಲಿ ಮಾದರಿ ಶಾಲೆ, ಪರಂಪರೆಯ ಹಿರಿಮೆ ಸಾರುವ ಸರ್ಕಾರಿ ಶಾಲೆ ನಮ್ಮ ಜಿಲ್ಲೆಯಲ್ಲಿ ತಲೆ ಎತ್ತಲಿದೆ. ಇದಕ್ಕೆಲ್ಲಾ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಹಣ ಬಳಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯೂ ಅಭಿವೃದ್ಧಿ: ಶಾಲೆಯಷ್ಟೇ ಅಲ್ಲದೇ ಗಣಿಬಾಧಿತ ಗ್ರಾಮವಾದ ತಾಲೂಕಿನ ಕೊತ್ತಲವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾಜ್ಯಕ್ಕೆ ಮಾದರಿ ಆಸ್ಪತ್ರೆಯಾಗಿ ರೂಪಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೊದಲಿಗೆ ಕೊತ್ತಕವಾಡಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದು ಜಿಲ್ಲಾಸ್ಪತ್ರೆ ನೀಡುವ ಸೌಲಭ್ಯದಷ್ಟೇ ಜನರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡೆಯಲಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆರಳುವ ರೋಗಿಗಳಿಗೆ ಪ್ರಯೋಗಾಲಯ, ಉತ್ತಮ ಆರೈಕೆ, ವಿವಿಧ ಪರೀಕ್ಷೆಗಳಿಗೆ ಬೇಕಾದ ಸಲಕರಣೆಗಳು, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ರಾಜ್ಯದಲ್ಲೇ ಉತ್ತಮ ಆಸ್ಪತ್ರೆ ಮಾಡಬೇಕೆಂಬ ಕನಸು ಜಿಲ್ಲಾಧಿಕಾರಿಯದ್ದಾಗಿದೆ.