ಚಾಮರಾಜನಗರ : ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿಯು (CWRC) ತಮಿಳುನಾಡಿಗೆ 18 ದಿನಗಳಲ್ಲಿ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹನೂರು ತಾಲೂಕಿನ ಮಾದಪ್ಪನ ಸನ್ನಿಧಾನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡುತ್ತೇವೆ. ಸದ್ಯ ನಮ್ಮ ಬಳಿ ನೀರು ಇಲ್ಲ, ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಳಿಕ, ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದರು.
ಚಾಮರಾಜನಗರಕ್ಕೆ ಅಂಟಿದ ಮೌಢ್ಯವನ್ನು ತೊಡೆದು ಹಾಕಿದ್ದೇನೆ. ಕಳೆದ ಬಾರಿ 12 ಸಲ ಭೇಟಿ ನೀಡಿ 5 ವರ್ಷ ಗಟ್ಟಿಯಾಗಿ ಆಡಳಿತ ನಡೆಸಿದ್ದೆ. ಇಂದು ಕೆಡಿಪಿ ಸಭೆ ನಡೆಸಲಿದ್ದೇನೆ. ಹಾಗೆಯೇ, ತೀವ್ರ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ದೇವರ ಮೊರೆ ಹೋಗಿದ್ದೇನೆ. ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಾದಪ್ಪನ ಮೇಲೆ ನನಗೆ ನಂಬಿಕೆ ಇದೆ. ಉತ್ತಮ ಮಳೆ ಬೀಳುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ: ನೀರು ಹಂಚಿಕೆ ವಿಚಾರವಾಗಿ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, "ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣ ಶಾಸನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : CWRC ಇಂದು ನೀಡಿರುವ ಆದೇಶ ಕನ್ನಡಿಗರ ಪಾಲಿಗೆ ಮರಣ ಶಾಸನ: ಹೆಚ್ ಡಿ ಕುಮಾರಸ್ವಾಮಿ
ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಆದೇಶ: 18 ದಿನಗಳ ಕಾಲ 3,000 ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಶಿಫಾರಸು ಮಾಡಿದೆ. ನಿನ್ನೆ ನಡೆದ CWRC ಸಭೆಯಲ್ಲಿ ಉಭಯ ರಾಜ್ಯಗಳ ವಾದ ಆಲಿಸಿ ತಮಿಳುನಾಡಿಗೆ 3,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಶಿಫಾರಸು ಮಾಡಿದೆ. ಈ ಮೂಲಕ ಈಗಾಗಲೇ ನೀರಿಲ್ಲದೆ ಬರಿದಾಗಿರುವ ರಾಜ್ಯಕ್ಕೆ ಸಮಿತಿಯು ಗಾಯದ ಮೇಲೆ ಬರೆ ಎಳೆದಿದೆ ಎಂಬುದು ರಾಜ್ಯದ ಜನರ ಆಕ್ರೋಶ. ಈ ಬೆನ್ನಲ್ಲೇ ಕರ್ನಾಟಕ ಸರ್ಕಾರವು 13.09.2023 ರಂದು ಹೊರಡಿಸಿದ ನೂತನ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ.
ಇದನ್ನೂ ಓದಿ : ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ.. 18 ದಿನ 3000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು