ಚಾಮರಾಜನಗರ: ಕೋವಿಡ್ ಎರಡನೇ ಅಲೆ ವೇಳೆ ಲಸಿಕೆಯಲ್ಲಿ ನೂರರಷ್ಟು ಸಾಧನೆ ಮಾಡಿ, ಕೊರೊನಾ ನಿಯಮ ಪಾಲಿಸುತ್ತಿದ್ದ ಹನೂರು ತಾಲೂಕಿನ ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್ಗೆ ಕೊರೊನಾ ವಕ್ಕರಿಸಿದೆ. ಇಲ್ಲಿನ 47 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕ್ಯಾಂಪಿನ ಎಸ್ ವಿಲೇಜಿನಲ್ಲಿ 9 ಮಂದಿ ಮಕ್ಕಳು ಸೇರಿದಂತೆ 47 ಮಂದಿಗೆ ಕೊರೊನಾ ಅಂಟಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು 50ಕ್ಕೂ ಹೆಚ್ಚು ಮಂದಿಯನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ ಎಂದು ಹನೂರು ಟಿಹೆಚ್ಒ ಪ್ರಕಾಶ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಓಂ ಶಕ್ತಿ ಭಕ್ತರಿಗೆ ಕೊರೊನಾ:
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಿಂದ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿ ವಾಪಸ್ ಆದ 8 ಮಂದಿಗೆ ಕೊರೊನಾ ಪಾಸಿಟವ್ ಧೃಡಪಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಓಂ ಶಕ್ತಿಗೆ ಬಸ್ನಲ್ಲಿ ತೆರಳಿದ್ದ 63 ಮಂದಿ ಇಂದು ಬೆಳಗಿನ ಜಾವ ಗ್ರಾಮಕ್ಕೆ ವಾಪಸ್ ಆಗಿದ್ದಾರೆ. ಎಲ್ಲರನ್ನು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆಸಿದ ವೇಳೆ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದವರ ಗಂಟಲು ದ್ರವ ಮಾದರಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದೆ. ಇದರ ವರದಿ ನಾಳೆ(ಗುರುವಾರ) ಬರಲಿದೆ.
ಕೋವಿಡ್ ಮರೆತ ಭಕ್ತರು?
ಕೋವಿಡ್ ಭೀತಿ ಹೆಚ್ಚುತ್ತಿದ್ದರೂ ಓಂ ಶಕ್ತಿಗೆ ತೆರಳಲು ಹಂಗಳ ಗ್ರಾಮದ ಮತ್ತೊಂದು ತಂಡ ಸಿದ್ಧವಾಗಿದೆ. ಸೋಂಕಿನ ತೀವ್ರತೆ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಓಂಶಕ್ತಿಗೆ ಹೋಗಲು ಸಿದ್ಧತೆ ನಡೆಸುತ್ತಿರುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ.
ಸೇಫ್ಟಿ ಕಿಟ್ ವಿತರಣೆ:
ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಇನ್ನಿತರರಿಗೆ ಇಮ್ಯುನಿಟಿ ಕಿಟ್ ಹಾಗೂ ಸೇಫ್ಟಿ ಕಿಟ್ ವಿತರಿಸುತ್ತಿದೆ. ಲಾಕ್ಡೌನ್ ಹಾಗೂ ಕರ್ಫ್ಯೂ ವೇಳೆಯಲ್ಲೂ ನಿತ್ಯ ಕಾಯಕ ಮಾಡುವ ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ನೀಡಿರುವ 10 ಸಾವಿರ ಕಿಟ್ಗಳನ್ನು ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲವನ್ನು ಕೇಂದ್ರ ಮಾಡಿಕೊಂಡು ವಿತರಿಸಲಾಗುತ್ತಿದ್ದು, ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಈವರೆಗೂ ಮೂರೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಈ ಕಿಟ್ಗಳನ್ನು ಕೊಡಲಾಗಿದೆ.
ಕಿಟ್ನಲ್ಲಿ ಏನೇನಿದೆ?
ಪ್ರತಿ ಕಾರ್ಮಿಕನಿಗೆ ಸೇಫ್ಟಿ ಕಿಟ್ ಹಾಗೂ ಇಮ್ಯುನಿಟಿ ಕಿಟ್ಗಳನ್ನು ಪ್ರತ್ಯೇಕವಾಗಿ ಕೊಡಲಾಗುತ್ತಿದ್ದು ಸೇಫ್ಟಿ ಕಿಟ್ನಲ್ಲಿ 20 ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸೋಪುಗಳು, ಸ್ಯಾನಿಟರಿ ಪ್ಯಾಡ್ ಇದೆ. ಇಮ್ಯುನಿಟಿ ಕಿಟ್ನಲ್ಲಿ ಆಯುಷ್ ಕ್ವಾತ್ ಚೂರ್ಣ, ಚ್ಯವನ್ಪ್ರಶ್, ಹರಿದ್ರ ಖಂಡ ರಸಾಯನ, ಬ್ರಾಹ್ಮಿ ಪುಡಿ ಕೊಡಲಾಗುತ್ತಿದ್ದು, ಕಾರ್ಮಿಕರ ಆರೋಗ್ಯ ವೃದ್ಧಿಗೆ ಸಹಾಯಕವಾಗಲಿದೆ.
ಇದನ್ನೂ ಓದಿ: ಪಾದಯಾತ್ರೆ ಕೈಬಿಡಿ, ಜನತೆ ಬಳಿ ಕ್ಷಮೆ ಕೇಳಿ: ಕೈ ನಾಯಕರಿಗೆ ಆರಗ ಜ್ಞಾನೇಂದ್ರ ಆಗ್ರಹ
ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿ ರಾಜೇಶ್ ಮಾತನಾಡಿ, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲ ನೋಂದಾಯಿತ ಕಾರ್ಮಿಕರಿಗೂ ಕಿಟ್ಗಳನ್ನು ಕೊಡಲಾಗುತ್ತಿದ್ದು, ಇಲ್ಲಿಯವರೆಗೆ 9 ಬಾರಿ ವಿವಿಧ ಫಲಾನುಭವಿಗಳಿಗೆ ಕಿಟ್ ಪೂರೈಸಲಾಗಿದೆ. ಈ ಬಾರಿ 10 ಸಾವಿರ ಮಂದಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು