ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಜೊತೆಗೆ ಕಾಲೇಜು ಪ್ರಾರಂಭವಾಗುವ ನಿರೀಕ್ಷೆ ಇರುವುದರಿಂದ ಬೇಡರಪುರ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ತೆರೆದಿದ್ದ ಕೋವಿಡ್ ಕೇರ್ ಸೆಂಟರ್ ಭಾನುವಾರ ಇಲ್ಲವೇ ಸೋಮವಾರ ಬಂದ್ ಮಾಡಲಾಗುತ್ತಿದೆ.
ಈ ಕುರಿತು ಡಿಎಚ್ಒ ಡಾ.ರವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, ಗುಂಡ್ಲುಪೇಟೆ, ಸಂತೇಮರಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭವಾಗಿರುವುದರಿಂದ ಮುಚ್ಚಲಾಗುತ್ತಿದೆ. ಬೇಡರಪುರ ಸೆಂಟರ್ನಲ್ಲಿ 417 ಹಾಸಿಗೆ ಸಾಮರ್ಥ್ಯವಿತ್ತು, ಈಗ ಅಲ್ಲಿ ಕೇವಲ 4 ಮಂದಿ ಅಷ್ಟೇ ಇದ್ದಾರೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಕೋವಿಡ್ ಸೆಂಟರ್ನಲ್ಲಿ 100 ಹಾಸಿಗೆ ಅಲ್ಲದೇ ಸಂತೇಮರಹಳ್ಳಿಯಲ್ಲಿ 60 ಮತ್ತು ಗುಂಡ್ಲುಪೇಟೆಯಲ್ಲಿ 50 ಹಾಸಿಗೆಗಳ ಕೇರ್ ಸೆಂಟರ್ ಇದೆ. ಇಷ್ಟೇ ಅಲ್ಲದೇ, ಕಬ್ಬಹಳ್ಳಿ ಮತ್ತು ಬೇಗೂರಿನಲ್ಲಿ 30 ಹಾಸಿಗೆ ಸಾಮರ್ಥ್ಯ ಸಿಸಿ ಸೆಂಟರ್‌ಗಳು ತೆರೆಯಲು ಯೋಜಿಸಲಾಗಿದೆ ಎಂದರು.
ಆರಂಭದ ದಿನಗಳಲ್ಲಿ ತುರ್ತು ಪರಿಸ್ಥಿತಿ ಇದ್ದಿದ್ದರಿಂದ ಬೇಡರಪುರದಲ್ಲಿ ಸೆಂಟರ್ ತೆರೆಯಲಾಯಿತು. ಈಗ, ಜಿಲ್ಲಾದ್ಯಂತ ಕೇಂದ್ರಗಳನ್ನು ತೆರೆಯುತ್ತಿರುವುದರಿಂದ ಬೇಡರಪುರ ಕೇಂದ್ರ ಸ್ಥಳಾಂತರವಾಗುತ್ತಿದೆ. ಹಾಸಿಗೆಗಳ ಸ್ಥಳಾಂತರದ ಬಳಿಕ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಕಾಲೇಜಿನ ಉಪಯೋಗಕ್ಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೋಂ ಐಸೋಲೇಷನ್ ವ್ಯವಸ್ಥೆಯೂ ಕೂಡ ಚಾಲ್ತಿಯಲ್ಲಿರುವುದು ಆರೋಗ್ಯ ಇಲಾಖೆಗೆ ಪ್ಲಸ್ ಪಾಯಿಂಟ್ ಆಗಿದ್ದು ಜಿಲ್ಲೆಯಲ್ಲಿನ ಸಾಕಷ್ಟು ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲಿ ಐಸೋಲೇಟ್ ಆಗುತ್ತಿರುವುದರಿಂದ ಬೇಡರಪುರ ಕೋವಿಡ್ ಕೇರ್ ಸೆಂಟರ್ ಬಂದ್ ಆಗಲಿದೆ ಎಂದರು.