ಚಾಮರಾಜನಗರ: ನಮ್ಮ ರಿಪೋರ್ಟ್ ಪ್ರಕಾರ ಕೊಳ್ಳೇಗಾಲದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಎನ್. ಮಹೇಶ್ ಅವರು ತಲೆಕೆಳಕಾಗಿ ನಡೆದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರ ರಾಜಕೀಯ ಅಂತಿಮ ಯಾತ್ರೆ ಆರಂಭವಾಗಿದೆ. ಮೂವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಯಾರೊಬ್ಬರ ಕಾಲನ್ನು ಯಾರೂ ಎಳೆಯಬಾರದು ಎಂದು ಸೂಚಿಸಿದರು.
ಸಂವಿಧಾನ ಬದಲಿಸುತ್ತೇವೆ ಎಂಬ ಪಕ್ಷಕ್ಕೆ ಎನ್ ಮಹೇಶ್ ಸೇರಿರುವುದ ಬೇಸರ ತಂದಿದೆ.. 'ತಾವು ನಂಬಿದ್ದ ಸಿದ್ಧಾಂತ, ತಾವು ನಡೆಸಿದ ಚಳವಳಿ, ಮಾಯಾವತಿ ಅವರ ನಾಯಕತ್ವ ಎಲ್ಲವನ್ನು ಬಿಟ್ಟು ಸಂವಿಧಾನ ಬದಲಿಸುತ್ತೇವೆ ಎಂಬ ಪಕ್ಷಕ್ಕೆ ಮಹೇಶ್ ಸೇರ್ಪಡೆಗೊಂಡಿರುವುದು ನನ್ನ ಮನಸ್ಸಿಗೆ ಬಹಳ ಬೇಸರ ತಂದಿತು, ಆನೆಯನ್ನು ಕಾಡಿಗಟ್ಟಿ ಕಮಲವನ್ನು ಹಿಡಿದ ಮಹೇಶ್ ಅವರಿಗೆ ಬಿಜೆಪಿ ಮಂತ್ರಿಗಿರಿ ಕೊಡಲಿಲ್ಲ, ಅವರೂ ಅಭಿವೃದ್ಧಿಯನ್ನು ಮಾಡಿಲ್ಲ, ರಾಜಕೀಯದ ಯೋಗವನ್ನು ಮಹೇಶ್ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ನಂಜುಂಡಸ್ವಾಮಿ ಕಾಂಗ್ರೆಸ್ ಸೇರಲಿದ್ದಾರೆ: ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವನ್ನು ಇದೇ ವೇಳೆ ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಿದರು. 'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ, ಕೆಲವೇ ದಿನಗಳಲ್ಲಿ ನನ್ನ ಜೊತೆಯೂ ಮಾತನಾಡಲಿದ್ದು, ತನ್ನ ರಾಜಕೀಯ ಕೊನೆ ನಿಲ್ದಾಣ ಕಾಂಗ್ರೆಸ್ ಎಂದು ಜಿ.ಎನ್. ನಂಜುಂಡಸ್ವಾಮಿ ತಿಳಿಸಿದ್ದಾರೆ' ಅಂತಾ ಡಿಕೆಶಿ ಹೇಳಿದರು.
ನಮ್ಮ ಸರ್ಕಾರ ಬರುವುದು ಖಚಿತ.. ಇರುವುದು ಒಂದು ಕುರ್ಚಿ. ಆದರೆ, ಆಕಾಂಕ್ಷಿಗಳು ಮಾತ್ರ ಮೂವರು ಇದ್ದಾರೆ. ನಮ್ಮ ಸರ್ಕಾರ ಬರುವುದು ಖಚಿತ, ಇಲ್ಲಿ ಒಬ್ಬರು ಎಂಎಲ್ಎ ಆಗ್ತಾರೆ. ಜೊತೆಗೆ ಉಳಿದ ಇಬ್ಬರನ್ನು ಸರ್ಕಾರಿ ಕಾರಲ್ಲಿ ಓಡಾಡುವ ರೀತಿ ಮಾಡುತ್ತೇವೆ ಎನ್ನುವ ಮೂಲಕ ಟಿಕೆಟ್ ತಪ್ಪಿದರೂ ಭವಿಷ್ಯದಲ್ಲಿ ಕೈ ಹಿಡಿಯುವ ಭರವಸೆ ಕೊಟ್ಟರು.
ಇದನ್ನೂ ಓದಿ: ಸಿದ್ದು ಹುಲಿ, ಡಿಕೆಶಿ ಸಿಂಹ, ಕಾಂಗ್ರೆಸ್ ಎಲ್ಲರಿಗೂ ತಂದೆ-ತಾಯಿ : ನಟ ಸಾಧುಕೋಕಿಲ
ತನಗೊಂದು ಅವಕಾಶ ಕೊಡಿ ಎಂದ ಎಆರ್ಕೆ: ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ತಮಗೊಂದು ಅವಕಾಶ ಈ ಬಾರಿ ಕೊಡಬೇಕು, ಜನರು ತನ್ನನ್ನು ಆಯ್ಕೆ ಮಾಡಿ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು. ಎಆರ್ ಕೆ ಅವರ ಈ ಮಾತು ಕೇಳಿ ಡಿಕೆಶಿ, ಆರ್.ಧ್ರುವನಾರಾಯಣ್ ನಸುನಕ್ಕರು.
'ನಾನು ಒಂದು ಮತದಿಂದ ಸೋತೆ, ಒಂದು ಮತದಿಂದ ಆರ್.ಧ್ರುವನಾರಾಯಣ ಗೆದ್ದರು, ಆ ಮೂಲಕ ಒಂದು ಮತದ ಬೆಲೆ ಇಡೀ ದೇಶಕ್ಕೆ ತಿಳಿಯಿತು. ಜಯಣ್ಣ,ಬಾಲರಾಜು ಸೇರಿ ಎಲ್ಲರಿಗೂ ಒಂದು ಅವಕಾಶ ಮಾಡಿಕೊಟ್ಟಿದ್ದೀರಿ, ನನಗೂ ಒಂದು ಅವಕಾಶ ಮಾಡಿಕೊಡಿ' ಎಂದರು.