ಚಾಮರಾಜನಗರ: ಬೆಳ್ಳಂಬೆಳಗ್ಗೆ ಕಾಗೆ ಕಂಡರೆ ಅಪಶಕುನ ಅಂತಾ ಭಾವಿಸುವವರೇ ಹೆಚ್ಚು. ಇಂತವರ ಮಧ್ಯೆ ಪಕ್ಷಿಪ್ರೇಮಿ ಆಗಿರುವ ಯುವತಿವೋರ್ವಳು ಕಾಗೆಯನ್ನು ಪೋಷಿಸುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ. ಕಾಗೆ ಮರಿ ಇದ್ದಾಗಿನಿಂದಲೂ ನೀರು, ಆಹಾರ ಕೊಟ್ಟಿದ್ದಲ್ಲದೆ ಅದಕ್ಕೊಂದು ಹೆಸರನ್ನಿಟ್ಟು ಸಾಕುತ್ತಿರುವ ವಿಶಿಷ್ಟ ಪಕ್ಷಿ ಪ್ರೇಮಿಯ ಸ್ಟೋರಿ ಇಲ್ಲಿದೆ ನೋಡಿ.
ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದ ಶಿಕ್ಷಕ ಮಹಾದೇವಸ್ವಾಮಿ ಅವರ ಮಗಳು ಮಹೇಶ್ವರಿ ಪ್ರಾಣಿ-ಪಕ್ಷಿಗಳು ಹಾಗೂ ಪರಿಸರದ ಮೇಲೆ ಅತೀವ ಪ್ರೀತಿ ಬೆಳೆಸಿಕೊಂಡಿದ್ದಾರೆ. ಊಟ, ತಿಂಡಿ, ಹಣ್ಣುಗಳನ್ನು ತಾವು ತಿನ್ನುವ ಮೊದಲು ಪಕ್ಷಿಗಳಿಗೆ ನೀಡುತ್ತಾರೆ. ಮುಖ್ಯವಾಗಿ, ಕಾಗೆಯೊಂದನ್ನು ವಿಶೇಷ ಆಸ್ಥೆಯಿಂದ ಸಾಕುತ್ತಿದ್ದಾರೆ. ಮನೆಯ ಮುಂದೆ ತಂದೆಯೊಂದಿಗೆ ಸೇರಿ ಅದ್ಭುತವಾದ ಕೈತೋಟ ನಿರ್ಮಿಸಿರುವ ಮಹೇಶ್ವರಿ, ತನ್ನ ಓದಿನೊಟ್ಟಿಗೆ ಗಿಡಗಳ ಪಾಲನೆಯನ್ಜು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ರಜೆ ಬಂತೆಂದರೆ ತಂದೆ-ಮಗಳು ಇಬ್ಬರ ಕಾಯಕ ಕೈತೋಟದ ಪಾಲನೆ, ಓದು ಜೊತೆಗೆ ಪಕ್ಷಿಗಳನ್ನು ನೋಡಿಕೊಳ್ಳುವುದು.
ಬಾ ಎಂದರೆ ಬರುತ್ತೆ- ಹೋಗು ಎಂದರೆ ಹೋಗುತ್ತೆ: ಮಹೇಶ್ವರಿ ಒಂದು ಕಾಗೆಗೆ ಸಿಂಚನಾ ಎಂದು ಹೆಸರಿಟ್ಟಿದ್ದು ಸಿಂಚು, ಸಿಂಚನಾ ಎಂದು ಕರೆದ ಕೂಡಲೇ ಬರುತ್ತದೆ. ಬ್ರೆಡ್, ಇಡ್ಲಿ ಸೇರಿದಂತೆ ಹಣ್ಣು ಹಂಪಲನ್ನು ಕಾಗೆಗೆ ಕೈಯಾರೆ ತಿನಿಸುತ್ತಾರೆ ಮಹೇಶ್ವರಿ. ಬೈ ಬೈ ಎಂದಕೂಡಲೇ ಹಾರಿಹೋಗುವ ಈ ಕಾಗೆ ಕಂಡರೆ ಅಚ್ಚರಿ ಎನಿಸುತ್ತೆ. ಗಿಳಿ, ಪಾರಿವಾಳ ಸಾಕುವವರ ನಡುವೆ ಹಂಚಿ ತಿನ್ನುವ ಕಾಗೆಯನ್ನು ಸಾಕುವ ಮೂಲಕ ಮಹೇಶ್ವರಿ ವಿಭಿನ್ನ ಪಕ್ಷಿ ಪ್ರೇಮವನ್ನು ಬೆಳೆಸಿಕೊಂಡಿದ್ದಾರೆ.