ಚಾಮರಾಜನಗರ: ಜಿಲ್ಲಾದ್ಯಂತ ಎರಡು ದಿನಗಳಿಂದ ವರುಣ ಬಿಡದೆ ಸುರಿಯುತ್ತಿದ್ದು, ನಿಲ್ಲದ ಮಳೆಯಿಂದ ಜನರು ಹೈರಣಾಗಿದ್ದಾರೆ.
![Public places are quiet due to rain](https://etvbharatimages.akamaized.net/etvbharat/prod-images/4074733_thumbcmrj.jpg)
ಬುಧವಾರ ತುಂತುರು ಮಳೆ ಎಡಬಿಡದೇ ಸುರಿದಿತ್ತು. ಆದರೆ, ಗುರುವಾರ ಜಿಲ್ಲೆಯ ಬಹುಪಾಲು ಭಾಗದಲ್ಲಿ ಜೋರು ಮಳೆಯೇ ಪ್ರಾರಂಭವಾಗಿದೆ. ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಮಾರುಕಟ್ಟೆ ಇತರೆ ವ್ಯಾಪಾರ-ವಹಿವಾಟುಗಳು ಸ್ತಬ್ಧಗೊಂಡಿವೆ. ಯಾರೂ ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಸಂತೇಮರಹಳ್ಳಿ, ಕೊಳ್ಳೇಗಾಲ, ಹನೂರು ಭಾಗದಲ್ಲಿ ಮಳೆ ಹೆಚ್ಚಾಗಿದೆ. ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಶಿವಕುಮಾರ್ ಎಂಬುವವರ ಮನೆ ಕುಸಿದಿದೆ. ನಗರದ ಜೆಎಸ್ಎಸ್ ಕಾಲೇಜಿನ ಗೇಟ್ ಮುಂಭಾಗದ ಗುಲ್ ಮೊಹರ್ ಮರ ಕಾರೊಂದರ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟರೆ ಕೊಳ್ಳೇಗಾಲದ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ.