ಚಾಮರಾಜನಗರ: ಇಡೀ ಜಗತ್ತನ್ನೇ ಬೆರಳತುದಿಗೆ ತಂದು ನಿಲ್ಲಿಸುವ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಎಲ್ಲವೂ ಸಾಧ್ಯವಿದೆ ಎಂಬುದಕ್ಕೆ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೈತ ಬಿ.ಲೋಕೇಶ್ ಉದಾಹರಣೆಯಾಗಿ ನಿಂತಿದ್ದಾರೆ. ತಾವು ಬೆಳೆದ ಮಾವಿನ ಹಣ್ಣಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಂಡು, ನಿವ್ವಳ ಲಾಭಗಳಿಸಿದ್ದಾರೆ.
ಅಂದಾಜು 9 ಏಕರೆಯಲ್ಲಿ ಯಾವುದೇ ರಾಸಾಯನಿಕ ಸಿಂಪಡಿಸದೇ ಸಾವಯವ ಕೃಷಿ ವಿಧಾನದ ಮೂಲಕ ಬಾದಾಮಿ, ಹಿಮಾಮ್ ಪಸಂದ್, ಮಲ್ಲಿಕಾ, ಕೇಸರ್, ಮಲ್ಗೋವಾ, ತೋತಾಪುರಿ ತಳಿಯ ಮಾವುಗಳನ್ನು ಲೋಕೇಶ್ ಬೆಳೆದಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಫಸಲನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಕೆಲವು ದಲ್ಲಾಳಿಗಳು 45 ಸಾವಿರ, 50 ಸಾವಿರ ರೂ.ಗೆ ಫಸಲನ್ನು ಕೊಡುವಂತೆ ಬಾಯಿಗೆ ಬಂದ ಧಾರಣೆ ಹೇಳಿದ್ದರಿಂದ ಆರ್ಥಿಕ ಸಂಕಷ್ಟ ಸಿಲುಕಿದೆಲ್ಲಾ ಎನ್ನುವಾಗ ರೈತನಿಗೆ ಫೇಸ್‌ಬುಕ್, ವಾಟ್ಸಾಪ್ ನೆರವಾಗಿದೆ.
ಜಾಲತಾಣದಲ್ಲಿ ಪಸರಿತು ಮಾವಿನ ಘಮಲು:
ಲೋಕೇಶ್ ತಾವು ಬೆಳೆದ ವಿವಿಧ ಸಾವಯವ ತಳಿಯ ಮಾವಿನ ಹಣ್ಣುಗಳ ಮಾರಾಟದ ಕುರಿತಾಗಿ ವಾಟ್ಸಾಪ್ ಹಾಗೂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಂಡಿದ್ದ ಗ್ರಾಹಕರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಪರಿಣಾಮ, ಇವರ ತೋಟದಲ್ಲಿದ್ದ ಮಾವಿನಹಣ್ಣುಗಳು ಕೆಲವು ದಿನಗಳಲ್ಲಿಯೇ ಅತ್ಯಧಿಕ ಬೆಲೆಗೆ ಮಾರಾಟವಾಗಿ ಬಂಪರ್ ಆದಾಯವನ್ನೇ ಪಡೆದಿದ್ದಾರೆ.
ಚಾಮರಾಜನಗರ ಪಟ್ಟಣಕ್ಕೆ ಐದು ಕೆ.ಜಿ.ಗಿಂತ ಹೆಚ್ಚು ಮಾವು ಖರೀದಿಸುವವರಿಗೆ ಮನೆ ಬಾಗಿಲಿಗೇ ಮಾವು ಒದಗಿಸುವ ಇವರ ನೂತನ ಆಲೋಚನೆ, ಮಾವಿನಹಣ್ಣಿಗೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಲು ಕಾರಣವಾಗಿದೆ. ಒಟ್ಟು 5 ಟನ್ ಮಾವಿನ ಹಣ್ಣುಗಳಲ್ಲಿ 3ಕ್ಕೂ ಹೆಚ್ಚು ಟನ್ ಹಣ್ಣುಗಳು ಬೆಂಗಳೂರಲ್ಲಿ ಮಾರಾಟವಾಗಿದ್ದು, ಉಳಿದ ಎರಡು ಟನ್ ಹಣ್ಣು ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಬಿಕರಿಯಾಗಿದೆ.
"ಈ ಬಾರಿ ಲಾಕ್‌ಡೌನ್ ಸಂಕಷ್ಟದಿಂದ ದಲ್ಲಾಳಿಗಳು ಮುಂದೆ ಬಾರದ ಕಾರಣ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಂಡು, ಮಾವಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಮಾಡಿಕೊಂಡೆ. ದಲ್ಲಾಳಿಗಳು ಕೇವಲ 50 ಸಾವಿ ರೂ.ಗಳಿಗೆ ತಮ್ಮ ತೋಟದ ಮಾವುಗಳನ್ನು ಕೇಳಿ ಕೈಬಿಟ್ಟಿದ್ದರು. ಆದರೆ ಸಾಮಾಜಿಕ ಜಾಲತಾಣಗಳ ಸದ್ಭಳಕೆಯಿಂದ ಜನರ ಮನೆ ಬಾಗಿಲಿಗೇ ನಮ್ಮ ಮಾವುಗಳನ್ನು ತಲುಪಿಸಿದ್ದರಿಂದ 4.5 ಲಕ್ಷರೂ.ವರೆಗೂ ನಿವ್ವಳ ಲಾಭ ಗಳಿಸಿದ್ದೇವೆ."
- ಲೋಕೇಶ್, ಮಾವು ಬೆಳೆದ ರೈತ