ಚಾಮರಾಜನಗರ: ಇಂದು ಗಣೇಶ ಹಬ್ಬ. ಭಕ್ತಿ-ಶ್ರದ್ಧೆಯಿಂದ ಗಣೇಶ ಹಬ್ಬವನ್ನು ಎಲ್ಲೆಡೆ ಆಚರಿಸುವುದನ್ನು ಕಾಣುತ್ತಿದ್ದೇವೆ. ಚಾಮರಾಜನಗರದ ಉಪ್ಪಾರ ಸಮುದಾಯದ ಕೆಲವು ಮನೆತನದವರು ಈ ಹಬ್ಬ ಮಾಡುವುದಿಲ್ಲ. ಅಷ್ಟೇ ಏಕೆ? ಇವರು ಮನೆಯಲ್ಲಿ ಅನ್ನ ಮಾಡಲ್ಲ. ಈ ದಿನ ಸ್ನಾನವನ್ನೂ ಮಾಡದೇ ಇರುವ ಸಂಪ್ರದಾಯ ಶತಮಾನಗಳಿಂದ ಮುಂದುವರೆದಿದೆ.
ವಿಘ್ನ ವಿನಾಯಕನನ್ನು ಇಡೀ ದೇಶವೇ ಸಂಭ್ರಮದಿಂದ ಬರಮಾಡಿಕೊಂಡು ಆರಾಧಿಸುತ್ತಿದೆ. ಆದರೆ ಈ ಸಮುದಾಯದವರು ಹೊಸ ಬಟ್ಟೆ ತೊಡದೆ, ಸ್ನಾನ ಮಾಡದೆ, ಅನ್ನ ಸೇವಿಸದೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವರು. ವಿಶೇಷ ಅಂದ್ರೆ, ಈ ಸಮುದಾಯದ ಶೇ.50ಕ್ಕೂ ಹೆಚ್ಚು ಮಂದಿ ಈ ರೀತಿಯ ಆಚರಣೆಯಿಂದ ದೂರ ಉಳಿದಿದ್ದಾರೆ.
ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುವುದಿರಲಿ, ರುಚಿಕಟ್ಟಾದ ಊಟವನ್ನೂ ಇವರು ಹಬ್ಬದ ದಿನ ಸೇವಿಸುವುದಿಲ್ಲ. ಮುದ್ದೆ, ಉಪ್ಪುಸಾರು ಕೆಲವರು ಉಪ್ಪುಸಾರಿಗೆ ಒಗ್ಗರಣೆಯನ್ನೂ ಹಾಕದೆ ಸಪ್ಪೆ ಸಾರಿನಲ್ಲೇ ಮುದ್ದೆ ಸೇವಿಸುವ ವಿಚಿತ್ರ ಸಂಪ್ರದಾಯವನ್ನು ತಲೆತಲಾಂತರದಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
ಈ ಪದ್ಧತಿಗೆ ಕಾರಣ ಏನು?
ಗೌರಿಗಣೇಶ ಹಬ್ಬ ಆಚರಿಸಿದರೆ ಮಕ್ಕಳಿಗೆ ಕೆಡುಕಾಗುವ ಭಯ ಈ ಸಮುದಾಯದಲ್ಲಿರುವ ರೂಢಿಗತವಾಗಿರುವ ನಂಬಿಕೆ. ಹಬ್ಬಾಚರಣೆಗೆ ಮುಂದಾದಾಗಲೆಲ್ಲಾ ಮಕ್ಕಳು ಅಥವಾ ಮನೆಯಲ್ಲಿ ಹಿರಿಯರು ಸಾವನ್ನಪ್ಪುವುದು ಸಂಭವಿಸಿದೆಯಂತೆ. ಹೀಗಾಗಿ, ಹಬ್ಬದ ಆಚರಣೆಯನ್ನೇ ಇವರು ಕೈಬಿಟ್ಟಿದ್ದಾರೆ.
ಕೆಲವರು ಇದನ್ನು ಧಿಕ್ಕರಿಸಿ ಅನ್ನ-ಸಾರು ಮಾಡಿದ ವೇಳೆ ತಿನ್ನುವ ಮೊದಲೇ ಯಾರಾದರೂ ಮೃತಪಟ್ಟಿದ್ದಾರಂತೆ. ಇಲ್ಲವೇ, ಆಹಾರದಲ್ಲಿ ಹುಳು ಕಾಣಿಸಿಕೊಂಡ ಪ್ರಸಂಗಗಳೂ ನಡೆದಿದೆಯಂತೆ. ಹಾಗಾಗಿ ಹಬ್ಬ ಆಚರಣೆ ಗೋಜಿಗೆ ಹೋಗದೆ ಮುದ್ದೆ- ಉಪ್ಪುಸಾರಿಗಷ್ಟೇ ಈ ಜನರು ತೃಪ್ತಿಪಡುತ್ತಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ಗಣೇಶ ಚತುರ್ಥಿ ದೊಡ್ಡ ಹಬ್ಬ. ಆದ್ದರಿಂದ ಮುದ್ದೆ, ನುಗ್ಗೆಸೊಪ್ಪಿನ ಉಪ್ಪುಸಾರು ಇಲ್ಲವೇ ಅಗಸೆ ಸೊಪ್ಪಿನ ಪಲ್ಯವನ್ನು ವಿನಾಯಕನಿಗೆ ಎಡೆಯಿಟ್ಟು ಇವರು ನಮಿಸುತ್ತಾರೆ. ಹಿರಿಯರ ಸಂಪ್ರದಾಯ ಇಂದಿನ ದಿನಮಾನಗಳಲ್ಲೂ ಹಾಗೆಯೇ ಮುಂದುವರೆದಿದೆ. ಹಬ್ಬದ ಮಾರನೇ ದಿನ ಸ್ನಾನ ಮಾಡುವ ಇವರು ಗಣಪನಿಗೆ ಪೂಜೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ವಸತಿರಹಿತರಿಗೆ ಸಿಹಿಸುದ್ದಿ: 4 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಸಿಎಂ ಸೂಚನೆ