ಚಾಮರಾಜನಗರ: ಟೀನೇಜ್ ಲವ್, ಮೆಚ್ಯೂರ್ಡ್ ಲವ್ ಹಾಗು ಸ್ವಾರ್ಥ ತುಂಬಿದ ಪ್ರೀತಿಯ ನಡುವೆ ಬದುಕೇ ಮೂರಾಬಟ್ಟೆಯಾಯಿತು ಎನ್ನುವಷ್ಟರ ಮಟ್ಟಿಗೆ ಅಪರಾಧ ಲೋಕಕ್ಕೆ ಸಿಲುಕಿದ ಇವರಿಬ್ಬರನ್ನೂ ಬದಲಿಸಿದ್ದು 'ಪ್ರೀತಿ'. ಇವರ ಜೀವನವನ್ನು ಮಾದರಿಯನ್ನಾಗಿಸಿದ್ದು ಒಲುಮೆ.
ಇಬ್ಬರೂ ಅಂದು ಅಪರಾಧಿಗಳು. ಆದರೆ, ಇಂದು ಸ್ವಾವಲಂಬಿ ಜೀವನ ನಡೆಸುತ್ತಿರುವ ಮಾದರಿ ವ್ಯಕ್ತಿಗಳು. ಪ್ರೇಮಿಗಳ ದಿನಕ್ಕೆ ಇದೊಂದು ಅಪರೂಪದ ಪ್ರೇಮ ಕಹಾನಿ. ಪೊಲೀಸ್ ಆಗಬೇಕೆಂದುಕೊಂಡವನು ಕೊನೆಗೆ ಕಾಡುಗಳ್ಳ ವೀರಪ್ಪನ್ ಗುಂಪಿಗೆ ಸೇರಿಕೊಂಡ. ತಮಿಳುನಾಡಿನ ಈರೋಡು ಜಿಲ್ಲೆಯ ಆಂದಿಯೂರು ತಾಲೂಕಿನ ಪುದುಕ್ಕಾಡು ಗ್ರಾಮದ ನಿವಾಸಿ ಅನ್ಬುರಾಜ್ ಗುಂಡಾಳ್ ಅವರು ಜಲಾಶಯ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಅಪಹರಿಸಿದ ಪ್ರಕರಣದಲ್ಲಿ 17 ವರ್ಷ ಜೈಲು ಶಿಕ್ಷೆ ಅನುಭವಿಸಿ ಕಳೆದ 2016ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಚೆನ್ನೈ ಮೂಲದ ರೇವತಿ ಎಂಬ ಅನಾಥೆ ತನ್ನ 14 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿದ್ದಳು. ಆಗ ತನ್ನನ್ನು ಮುಂಬೈಗೆ ಮಾರಾಟ ಮಾಡಲು ಮುಂದಾದ ವ್ಯಕ್ತಿಯೊಬ್ಬರನ್ನು ಈಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಬಳಿಕ, ತನ್ನ 18ನೇ ವಯಸ್ಸಿನಲ್ಲಿ ಎಲ್ಲ ತಪ್ಪನ್ನು ಒಪ್ಪಿಕೊಂಡಿದ್ದರಿಂದ 2006ರಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. 13 ವರ್ಷಗಳ ಜೈಲುವಾಸದ ನಂತರ 2015ರಲ್ಲಿ ಬಿಡುಗಡೆಯಾಗಿದ್ದಾರೆ.
ಪ್ರೀತಿಗೆ ಶ್ರೀಕಾರ ಹಾಕಿದ ನಾಟಕ: ಖೈದಿಗಳ ಬದುಕನ್ನು ಹಸನು ಮಾಡಬೇಕು, ಮುಖ್ಯವಾಹಿನಿಗೆ ಬಂದು ಎಲ್ಲರೊಂದಿಗೂ ಬೆರೆಯಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ 'ಸಂಕಲ್ಪ' ಎಂಬ ರಂಗ ತಂಡಕ್ಕೆ ಮೈಸೂರು ಜೈಲಿನಲ್ಲಿದ್ದ ಅನ್ಬುರಾಜ್ ಸೇರಿಕೊಳ್ಳುತ್ತಾರೆ. ಅದರಂತೆ ಬೆಂಗಳೂರು ಜೈಲಿನಲ್ಲಿದ್ದ ರೇವತಿ ತಂಡಕ್ಕೆ ಸೇರಿಕೊಂಡ ಬಳಿಕ ಇಬ್ಬರಲ್ಲೂ ಸ್ನೇಹ ಚಿಗುರೊಡೆಯುತ್ತದೆ.
ಹಲವಾರು ಊರುಗಳಿಗೆ ತೆರಳುತ್ತಿದ್ದಾಗ ಇಬ್ಬರಲ್ಲೂ ಪ್ರೇಮ ಮೊಳಕೆಯೊಡೆದು ಸನ್ನಡತೆಯ ಆಧಾರದ ಮೇಲೆ 2011ರಲ್ಲಿ ಇಬ್ಬರಿಗೂ ಪೆರೋಲ್ ನೀಡಿದಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ರೇವತಿ ಜೈಲಿನಲ್ಲಿರುವಾಗಲೇ 'ಮುಕ್ತಾ' ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಈಗ ಮುಕ್ತಳಿಗೆ 10 ವರ್ಷವಾಗಿದ್ದು, 'ಅಗರನ್' ಎಂಬ 2 ವರ್ಷದ ಗಂಡು ಮಗನೂ ಇದ್ದಾನೆ.
ಜೈಲಿನಿಂದ ಬಂದ ಬಳಿಕ ಇಬ್ಬರೂ ಈರೋಡು ಜಿಲ್ಲೆಯ ಆಂದಿಯೂರು ತಾಲೂಕಿನ ಪುದುಕ್ಕಾಡು ಗ್ರಾಮದಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಕೊಬ್ಬರಿ ಎಣ್ಣೆ ಮಿಲ್ ಆರಂಭಿಸಿ 4-5 ಮಂದಿಗೆ ಕೆಲಸ ನೀಡಿದ್ದಾರೆ. ಅಲ್ಲದೇ ಗಿರಿಜನ- ಪರಿಸರ ಕುರಿತಾದ ತ್ರೈಮಾಸಿಕ ಪತ್ರಿಕೆಯನ್ನೂ ಅನ್ಬು ನಡೆಸುತ್ತಿದ್ದಾರೆ.
ಪ್ರೀತಿಯೊಂದಿದ್ದರೆ ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ಈ ಜೋಡಿ ನಿದರ್ಶನವಾಗಿದೆ. ಜೈಲು ಸೇರಿದ ಮಾತ್ರಕ್ಕೇ ಬದುಕು ಮುಗಿಯಿತು ಎನ್ನುವವರಿಗೆ ಇವರ ಜೀವನ ಉತ್ತರ ನೀಡಿದೆ.